ADVERTISEMENT

ಇರಾಕ್ - ಸುಡಾನ್ ವಿದ್ಯಾರ್ಥಿಗಳ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 19:05 IST
Last Updated 7 ಮಾರ್ಚ್ 2011, 19:05 IST

ಬೆಂಗಳೂರು: ಪಾನಮತ್ತರಾಗಿದ್ದ ಇರಾಕ್ ಮತ್ತು ಸುಡಾನ್ ದೇಶದ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಬಾಣಸವಾಡಿಯ ಮರಿಯಪ್ಪ ವೃತ್ತದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.ಸುಡಾನ್‌ನ ಶೇಖ್ ಅಬ್ಬಾಸ್ (27) ಗಾಯಗೊಂಡವನು. ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ‘ಮಾಕಾ’ ಕಾಲೇಜಿನಲ್ಲಿ ಬಿಬಿಎಂ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಆತ ತನ್ನ ಸ್ನೇಹಿತರೊಂದಿಗೆ ಕಸ್ತೂರಿನಗರದಲ್ಲಿ ವಾಸವಾಗಿದ್ದ.

ಸಿಎಂಆರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇರಾಕ್ ದೇಶದ ವಿದ್ಯಾರ್ಥಿಗಳು ಮತ್ತು ‘ಮಾಕಾ’ ಕಾಲೇಜಿನಲ್ಲಿ ಓದುತ್ತಿದ್ದ ಶೇಖ್ ಅಬ್ಬಾಸ್ ಮತ್ತು ಆತನ ಸ್ನೇಹಿತರು ಬಾರ್ ಅಂಡ್ ರೆಸ್ಟೋರೆಂಟ್‌ವೊಂದರಲ್ಲಿ ರಾತ್ರಿ ಮದ್ಯ ಕುಡಿದಿದ್ದಾರೆ. ಪಾನಮತ್ತರಾಗಿದ್ದ ಎರಡೂ ಗುಂಪುಗಳ ನಡುವೆ ಹಣಕಾಸಿನ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಇರಾಕ್‌ನ ಹೈದರ್ ಮತ್ತು ಆತನ ಸ್ನೇಹಿತರು ಶೇಖ್ ಅಬ್ಬಾಸ್‌ನ ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ನಂತರ ಹೈದರ್ ಮತ್ತು ಆತನ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.