ADVERTISEMENT

ಇಲಾಖೆಯ ಆಡಳಿತ ತೃಪ್ತಿ ತಂದಿಲ್ಲ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2011, 19:30 IST
Last Updated 3 ನವೆಂಬರ್ 2011, 19:30 IST
ಇಲಾಖೆಯ ಆಡಳಿತ ತೃಪ್ತಿ ತಂದಿಲ್ಲ
ಇಲಾಖೆಯ ಆಡಳಿತ ತೃಪ್ತಿ ತಂದಿಲ್ಲ   

ಬೆಂಗಳೂರು: `ಹದಿಮೂರು ತಿಂಗಳು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದೂ ಇಲಾಖೆಯ ಆಡಳಿತ ಇನ್ನೂ ನನಗೆ ತೃಪ್ತಿತಂದಿಲ್ಲ. ಆಡಳಿತ ಸುಧಾರಣೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಹಾಗೂ ವಸತಿ ಶಾಲೆಗಳ ಮೇಲ್ವಿಚಾರಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು `ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿ ಉತ್ತಮವಾಗಬೇಕಿದೆ. ಇದಕ್ಕಾಗಿ ಮೇಲ್ವಿಚಾರಕರು ಹಾಗೂ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಹೆಚ್ಚು ಜವಾಬ್ದಾಯಿಂದ ಕೆಲಸ ಮಾಡಬೇಕು~ ಎಂದರು.

`ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ನಿರ್ಲಕ್ಷತೆಯ ಕಾರಣದಿಂದ ವಿದ್ಯಾರ್ಥಿ ನಿಲಯಗಳು ಶೋಚನೀಯ ಸ್ಥಿತಿ ತಲುಪಿವೆ. ಇಲಾಖೆಯ ಅಧಿಕಾರಿಗಳು ಇನ್ನು ಮುಂದಾದರೂ ಬದ್ಧತೆಯಿಂದ ಕೆಲಸಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಮರ್ಪಕವಾಗಿ ಕೆಲಸ ಮಾಡದವರ ಪಾಲಿಗೆ ನಾನು ಖಳನಾಯಕ ಆಗಬೇಕಾಗುತ್ತದೆ~ ಎಂದು ಅವರು ಎಚ್ಚರಿಸಿದರು.

`ವಿದ್ಯಾರ್ಥಿ ನಿಲಯಗಳ ಹಾಜರಾತಿ ಹಾಗೂ ದಾಖಲೆಗಳ ಸರಿಯಾದ ನಿರ್ವಹಣೆಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಹಾಗೂ ಕ್ಯಾಮೆರಾ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ 10 ಕೋಟಿ ರೂ.ಗಳ ನೂತನ ತಂತ್ರಜ್ಞಾನ ಅಳವಡಿಕೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ~ ಎಂದು ತಿಳಿಸಿದರು.

`ನಾನೂ ಕೂಡಾ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡೇ ಕಲಿತವನು. ಆಗ ಇದ್ದ ಉತ್ತಮ ಪರಿಸ್ಥಿತಿ ಈಗಿಲ್ಲ. 83 ಸಾವಿರ ಕೋಟಿ ರೂ.ಗಳ ಬಜೆಟ್ ಇದ್ದರೂ ಇಲಾಖೆಯ ವಿದ್ಯಾರ್ಥಿ ನಿಲಯಗಳು ಸುಧಾರಣೆ ಕಂಡಿಲ್ಲ. ಇಲಾಖೆಯ ಅಧಿಕಾರಿಗಳು ಜಡ್ಡುಗಟ್ಟಿ ಹೋಗಿದ್ದಾರೆ. ಹೊಸ ವಸತಿ ಶಾಲೆಗಳಿಗೆ ಅಂದಾಜು ಪಟ್ಟಿ ಕಳುಹಿಸಿ ಕೊಡುವಂತೆ ಕೇಳಿ ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೂ ಒಂದೇ ಒಂದು ಪ್ರಸ್ತಾವನೆಯನ್ನೂ ಅಧಿಕಾರಿಗಳು ಕಳುಹಿಸಿಕೊಟ್ಟಿಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.

`ಮುಖ್ಯವಾಗಿ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಅಧಿಕಾರಿಗಳ ನಿರ್ಲಕ್ಷತೆಯ ಆಧಾರದ ಮೇಲೆ ಅವರನ್ನು ಅಮಾನತ್ತು ಮಾಡಿದರೂ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುತ್ತಾರೆ. ಹೀಗಾದರೆ ಇಲಾಖೆಯಲ್ಲಿ ಸುಧಾರಣೆ ಸಾಧ್ಯವೇ ಇಲ್ಲ~ ಎಂದು ಅವರು ವಿಷಾದಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ, ಆಯುಕ್ತ ನವೀನ್ ರಾಜ್ ಸಿಂಗ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಶಾಂತರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.