ADVERTISEMENT

ಇಷ್ಟವಿದ್ದರೆ ಕಷ್ಟವಲ್ಲ ಶಿಲ್ಪಕಲೆ

ಕಲಾವಿದೆ ಕನಕಾಮೂರ್ತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2014, 19:30 IST
Last Updated 19 ಜುಲೈ 2014, 19:30 IST

ಬೆಂಗಳೂರು: ‘ಕಲ್ಲು ಮತ್ತು ಕೆತ್ತನೆಯ ಕೆಲಸ ಇವೇ ನನ್ನ ಜೀವಾಳ. ಒರಟಾದ ಕಲ್ಲನ್ನು ಕೆತ್ತಿ ಶಿಲ್ಪ ಮಾಡಲು ಏಕಾಗ್ರತೆ ಮತ್ತು ಶಕ್ತಿ ಎರಡೂ ಬೇಕು. ನನಗೆ ಆಸಕ್ತಿ ಇದ್ದುದರಿಂದ ನನಗೆ ಕಷ್ಟ ಎನಿಸಲಿಲ್ಲ’ ಎಂದು ಶಿಲ್ಪಕಲಾ ಕಲಾವಿದೆ ಕನಕಾ­ಮೂರ್ತಿ ತಮ್ಮ ಮನದಾಳದ ಮಾತು ಬಿಚ್ಚಿಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ ಏರ್ಪ­ಡಿಸಿದ್ದ 156ನೇ ‘ಮನೆಯಂಗಳ­ದಲ್ಲಿ ಮಾತು­ಕತೆ’ಯ ತಿಂಗಳ ಅತಿಥಿ­ಗ­ಳಾಗಿ ಮಾತ­­ನಾಡಿದ ಅವರು, ‘ನನಗೆ ಮೊದಲು ಸಂಗೀತದಲ್ಲಿ ಆಸಕ್ತಿ ಇತ್ತು. ಅದನ್ನು ಕಲಿಯಬೇಕೆಂದರೆ ನನ್ನ ಶ್ರೀಮಂತ ತಂದೆಗೆ ಮನಸ್ಸಿರಲಿಲ್ಲ. ಶಿಲ್ಪಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದ ವಾದಿರಾಜರ ಪರಿಚಯ­ವಾಯಿತು. ಅವರ ಹತ್ತಿರ ಸುಮಾರು 35 ವರ್ಷಗಳ ಕಾಲ ಕಲ್ಲನ್ನು ಕೆತ್ತಿ ಶಿಲ್ಪವನ್ನು ಮಾಡುವುದನ್ನು ಕಲಿತೆ’ ಎಂದರು.

‘1969ರಲ್ಲಿ ನನ್ನ ಮದುವೆಯಾ­ಯಿತು. ನಮ್ಮ ಮನೆಯವರೂ ಸಹ ಶಿಲ್ಪಕಲೆ ವಿಷಯದಲ್ಲಿ ಅಡ್ಡಿಪಡಿ­ಸಲಿಲ್ಲ. ನಾನು ಸಂಪ್ರ­ದಾಯ ಶಿಲ್ಪಿ ಎಂದೇ ಗುರು­ತಿ­ಸಿ­­ಕೊಂಡಿ­ದ್ದೇನೆ. ನಾವು ಮಾಡುವ ಕೆಲಸವನ್ನು ಪ್ರೀತಿಸಿದರೆ ಮಾತ್ರ ಅಲ್ಲಿ ಬೇರೆ, ಬೇರೆ ದಾರಿಗಳು ಸಿಗುತ್ತವೆ’ ಎಂದು ನುಡಿದರು.

‘ಕಲ್ಲಲ್ಲಿ ಸ್ವರ ಬರಿಸುವ ಶಿಲ್ಪಗಳನ್ನು ಕೆತ್ತುವ ಬಗ್ಗೆ ಆಸಕ್ತಿ ವಹಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂಬ ನೋವು ನನಗಿದೆ. ನನಗೀಗ 72 ವರ್ಷ. ಕಲ್ಲಿನ ಜೊತೆಯೇ ಇರುತ್ತೇನೆ ಮತ್ತು ನಾನು ಸಾಯುವ ವರೆಗೂ ಕಲ್ಲುಗಳನ್ನು ಕೆತ್ತುತ್ತ ಇರುತ್ತೇನೆ’ ಎಂದು ನುಡಿದರು.

‘ಶಿಲ್ಪಕಲೆ ಅತ್ಯಂತ ಪ್ರಾಚೀನವಾದ ಕಲೆ. ಸರ್ಕಾರ ಬೇರೆ ಎಲ್ಲ ಕಲೆಯ ಪ್ರಕಾರ­ಗಳಿಗೆ ನೀಡುವ ಸೌಲಭ್ಯಗಳನ್ನು ಈ ಕಲೆಗೆ ಕೊಡುತ್ತಿಲ್ಲ. ಕಲ್ಲಿನ ಬೆಲೆ ಗಗನಕ್ಕೆ ಏರು­ತ್ತಿದೆ. ಕಲಾವಿದರು ಕಷ್ಟ ಅನುಭವಿ­ಸು­ತ್ತಿ­ದ್ದಾರೆ. ಅನೇಕ ಬಾರಿ ಮನವಿ ಮಾಡಿ­ಕೊಂಡರೂ ಏನೂ ಪ್ರಯೋಜನ­ವಾಗಿಲ್ಲ. ಇನ್ನಾದರೂ ಸರ್ಕಾರ ಶಿಲ್ಪ­ಕಲೆಯ ಕಲಾವಿದರ ನೆರವಿಗೆ ಬಂದರೆ ನಾಡು ಶಿಲ್ಪಿಗಳ ನಾಡಾದೀತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.