ADVERTISEMENT

ಇ-ಟೆಂಡರ್ ವಿರುದ್ಧ ಅರ್ಜಿ: ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:00 IST
Last Updated 2 ಜೂನ್ 2011, 19:00 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇ-ಟೆಂಡರ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸುವುದರ ವಿರುದ್ಧ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಬಿಡಿಎ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಲಾಗಿದೆ.

ಇದು ಕೇವಲ ಕಂಪ್ಯೂಟರ್ ಜ್ಞಾನ ಇರುವವರಿಗೆ ಮಾತ್ರ ಅನುಕೂಲ ಆಗುವಂತಿದೆ ಎಂದು ಎಂ.ಸುಬ್ಬಾ ರೆಡ್ಡಿ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ಮೂಲೆ ನಿವೇಶನಕ್ಕೆ ಸಂಬಂಧಿಸಿದಂತೆ ಬಿಡಿಎ ಕಳೆದ ಮೇ 11ರಂದು ಕರೆದಿರುವ `ಇ-ಟೆಂಡರ್~ನಲ್ಲಿ ಉಂಟಾಗಿರುವ ತೊಂದರೆ ಕುರಿತು ವಿವರಿಸಿರುವ ಅವರು, ಇದರ ರದ್ದತಿಗೆ ಕೋರಿದ್ದಾರೆ.

`ಚದರ ಮೀಟರ್‌ಗೆ ರೂ 53 ಸಾವಿರ ಬಿಡ್ ಮೊತ್ತವನ್ನು ಟೆಂಡರ್ ಸಲ್ಲಿಕೆಯ ಕೊನೆಯ ದಿನವಾದ ಮೇ 25ರ ಮಧ್ಯಾಹ್ನ 3.56ಕ್ಕೆ ಎಂ.ಎಂ.ನಾಯ್ಡು ಎನ್ನುವವರು ನಮೂದು ಮಾಡಿದ್ದರು. ಅದೇ ದಿನ ನಾನು ಬಿಡಿಎ ಕಚೇರಿಗೆ ತೆರಳಿ ಇದಕ್ಕೆಂದೇ ಮೀಸಲು ಇರಿಸಿದ್ದ ವಿಶೇಷ ಸಿಬ್ಬಂದಿ ಮೂಲಕ 3.59ಕ್ಕೆ 54 ಸಾವಿರ ರೂಪಾಯಿಗಳ ಬಿಡ್ ಮೊತ್ತ ನಮೂದು ಮಾಡಿದ್ದೆ. ಆದರೆ ಇದನ್ನು ಕಂಪ್ಯೂಟರ್ ತೆಗೆದುಕೊಳ್ಳಲಿಲ್ಲ.

ಟೆಂಡರ್ ಸಲ್ಲಿಕೆಗೆ 4 ಗಂಟೆ ಕೊನೆ ಆಗಿದ್ದರಿಂದ ನನಗೆ ಟೆಂಡರ್ ದೊರಕಲಿಲ್ಲ. ~ನಾನು ಹಾಕಿರುವ ಬಿಡ್ ಮೊತ್ತ ಕಂಪ್ಯೂಟರ್ ಪಡೆದುಕೊಳ್ಳದಂತೆ ಮಾಡುವಲ್ಲಿ ಬಿಡಿಎ ಸಿಬ್ಬಂದಿ ಕೈವಾಡ ಇದೆ. ನಾಯ್ಡು ಅವರ ಜೊತೆ ಶಾಮೀಲಾಗಿ ಈ ಕೃತ್ಯ  ಎಸಗಿದ್ದಾರೆ. ನನಗೆ ಕಂಪ್ಯೂಟರ್ ಜ್ಞಾನ ಅಷ್ಟೊಂದು ಇಲ್ಲದ ಹಿನ್ನೆಲೆಯಲ್ಲಿ ಈ ರೀತಿ ತೊಂದರೆ ಆಗಿದೆ. ಇದು ಬಹಳ ಮೋಸ~ ಎಂದು ಅರ್ಜಿಯಲ್ಲಿ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.