ADVERTISEMENT

ಉತ್ತರ ಪತ್ರಿಕೆಗಳ ಮೇಲೆ ಹದ್ದಿನ ಕಣ್ಣು!

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 19:30 IST
Last Updated 7 ಆಗಸ್ಟ್ 2012, 19:30 IST

ಬೆಂಗಳೂರು: ಪರೀಕ್ಷಾ ಅಕ್ರಮ ತಡೆಯಲು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ವಿವಿಧ ಕ್ರಮಗಳನ್ನು ಕೈಗೊಂಡಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು, ಉತ್ತರ ಪತ್ರಿಕೆಗಳಿಗೆ ರೇಡಿಯೊ ತರಂಗಾಂತರ ಗ್ರಹಿಸುವ ಸಾಧನ (ಆರ್‌ಎಫ್‌ಐಡಿ) ಅಳವಡಿಸಲಿದೆ.

ಆರ್‌ಎಫ್‌ಐಡಿ (ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್) ಹೊಂದಿರುವ ಉತ್ತರ ಪತ್ರಿಕೆಗಳು ಮುಂದಿನ ವರ್ಷದಿಂದ ಬಳಕೆಗೆ ಬರಲಿವೆ. ಈ ಉತ್ತರ ಪತ್ರಿಕೆಗಳು ಮೌಲ್ಯಮಾಪನ ಕೇಂದ್ರದಲ್ಲಿ ಯಾವ ಸಂದರ್ಭದಲ್ಲಿ ಎಲ್ಲಿರುತ್ತವೆ, ಯಾವ ಕೊಠಡಿಯಲ್ಲಿರುತ್ತವೆ ಎಂಬುದನ್ನೂ ಆರ್‌ಎಫ್‌ಐಡಿ ಸಹಾಯದಿಂದ ಪತ್ತೆ ಮಾಡಲು ಸಾಧ್ಯ!

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿ.ವಿ. ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್ ಮತ್ತು ಕುಲಸಚಿವ (ಮೌಲ್ಯಮಾಪನ) ಡಾ.ಎನ್.ಎಸ್. ಅಶೋಕ್ ಕುಮಾರ್, `ನಕಲು ಮಾಡದಂತೆ ತಡೆಯಲು ಜಪಾನ್ ತಂತ್ರಜ್ಞಾನ ಬಳಸಿ, ನೂತನ ಮಾದರಿಯ ಅಂಕಪಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಇವುಗಳನ್ನು ನಕಲು ಮಾಡುವುದು ಅಸಾಧ್ಯ. ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಕ್ಕೂ ಆರ್‌ಎಫ್‌ಐಡಿ ಅಳವಡಿಸುವ ಚಿಂತನೆ ಇದೆ~ ಎಂದು ತಿಳಿಸಿದರು.

ADVERTISEMENT

ಸಿಹಿ ಸುದ್ದಿ: ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೂವರು ಪ್ರಾಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಲಾಗುತ್ತದೆ. ಅವರು ನೀಡುವ ಅಂಕದಲ್ಲಿ ಮೊದಲ ಎರಡು ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ, ವಿದ್ಯಾರ್ಥಿ ಉತ್ತೀರ್ಣ ಅಥವಾ ಅನುತ್ತೀರ್ಣ ಎಂಬುದನ್ನು ನಿರ್ಣಯಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಅಶೋಕ್ ಕುಮಾರ್ ವಿವರಿಸಿದರು. ಈ ವ್ಯವಸ್ಥೆಯನ್ನು ಪದವಿ ಕೋರ್ಸ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ, ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದರು.

ಆನ್‌ಲೈನ್ ಪ್ರಶ್ನೆಪತ್ರಿಕೆ:  ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವುದನ್ನು ತಪ್ಪಿಸಲು, ಆನ್‌ಲೈನ್ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ರವಾನಿಸಲಾಗುತ್ತಿದೆ. ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲೇ ವಿದ್ಯಾರ್ಥಿಗಳು ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾಜರಿರುತ್ತಾರೆ. ಪರೀಕ್ಷೆ ಆರಂಭವಾಗಲು ಅರ್ಧ ಗಂಟೆ ಮೊದಲು ಪ್ರಶ್ನೆಪತ್ರಿಕೆಗಳು ಕೇಂದ್ರಗಳಿಗೆ ರವಾನೆಯಾಗುವ ಕಾರಣ, ಅವು ಸೋರಿಕೆಯಾಗುವ ಸಾಧ್ಯತೆಯೇ ಇಲ್ಲವಾಗುತ್ತದೆ ಎಂದು ಡಾ. ಶ್ರೀಪ್ರಕಾಶ್ ಹೇಳಿದರು.

ಮೌಲ್ಯಮಾಪನವನ್ನೂ ಆನ್‌ಲೈನ್ ಮೂಲಕ ನಡೆಸುವ ವ್ಯವಸ್ಥೆಯನ್ನು ಶೀಘ್ರದಲ್ಲೇ ರೂಪಿಸಲಾಗುವುದು. ಪ್ರಾಂತ್ಯವಾರು ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ಬಂದ ನಂತರ ಮೂರು ವಾರಗಳಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿದೆ. ಆನ್‌ಲೈನ್ ಮೂಲಕ ತಾತ್ಕಾಲಿಕ ಪ್ರಮಾಣಪತ್ರ ನೀಡುವ ಬಗ್ಗೆ ವಿ.ವಿ ಚಿಂತನೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದರು.

ಶೀಘ್ರ ವರದಿ: ವಿ.ವಿ. ನಡೆಸುವ ಪರೀಕ್ಷೆಗಳ ಸುಧಾರಣೆ ಕುರಿತು ಪರಿಶೀಲನೆ ನಡೆಸಲು ವಿಶ್ರಾಂತ ಕುಲಸಚಿವ ಡಾ. ಶ್ರೀನಿವಾಸ ಗೌಡ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಶೀಘ್ರದಲ್ಲೇ ವರದಿ ನೀಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕುಲಸಚಿವ ಡಾ.ಡಿ. ಪ್ರೇಮಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.