ADVERTISEMENT

ಉದ್ಯಮಗಳಿಗೆ ಜೀವಿತಾವಧಿ ಅನುಮತಿಗೆ ಚಿಂತನೆ: ನಿರಾಣಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST

ಬೆಂಗಳೂರು: ರಾಜ್ಯದತ್ತ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಉದ್ಯಮಗಳಿಗೆ ಜೀವಿತಾವಧಿ ಅನುಮತಿಗಳನ್ನು ನೀಡಲು ಕೆಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.

ವಿಕಾಸಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈಗ ಇರುವ ಕಾಯ್ದೆಗಳ ಪ್ರಕಾರ ಉದ್ಯಮ ಅಥವಾ ಕೈಗಾರಿಕೆಗಳನ್ನು ಸ್ಥಾಪಿಸುವವರು ಪರಿಸರ, ಮಾಲಿನ್ಯ ನಿಯಂತ್ರಣ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಸರ್ಕಾರದಿಂದ ಅನುಮತಿ ಪಡೆಯಬೇಕು. ಇದರಿಂದ ಹೂಡಿಕೆದಾರರು ರಾಜ್ಯದಲ್ಲಿ ಹೂಡಿಕೆಗೆ ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಜೀವಿತಾವಧಿ ಅನುಮತಿ ನೀಡುವ ಪದ್ಧತಿ ಜಾರಿಗೊಳಿಸುವ ಕುರಿತು ಯೋಚಿಸಲಾಗಿದೆ~ ಎಂದರು.

ಕೃಷಿ ಭೂಮಿಯನ್ನು ರೈತರು ಕೈಗಾರಿಕೆಗಳ ನಿರ್ಮಾಣಕ್ಕೆ ನೀಡಲು ಸಿದ್ಧರಿದ್ದರೂ ಭೂ ಸುಧಾರಣಾ ಕಾಯ್ದೆಯ ಕಲಂ 79(ಎ) ಮತ್ತು 79 (ಬಿ) ಪ್ರಕಾರ ಅದನ್ನು ಪಡೆಯುವಂತಿಲ್ಲ. ರೈತರಿಂದ ನೇರವಾಗಿ ಉದ್ಯಮಿಗಳೇ ಭೂಮಿ ಖರೀದಿಸುವುದಕ್ಕೂ ಕಾನೂನಿನ ತೊಡಕುಗಳಿವೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೂ ಕೆಲವು ತಿದ್ದುಪಡಿಗಳನ್ನು ತರಲು ಯೋಚಿಸಲಾಗಿದೆ. ಈ ಪ್ರಸ್ತಾವವನ್ನು ಶೀಘ್ರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

ಬಂಡವಾಳ ಆಕರ್ಷಿಸುವುದಕ್ಕೆ ಪೂರಕವಾಗಿ ಕೆಲ ನೀತಿಗಳಲ್ಲೂ ಬದಲಾವಣೆ ತರಲಾಗುವುದು. ರಾಜ್ಯದ ಜವಳಿ ನೀತಿಯನ್ನು ಪರಿಷ್ಕರಿಸಲು ಯೋಚಿಸಲಾಗಿದೆ. ಏರೋಸ್ಪೇಸ್ ನೀತಿಯ ಕರಡು ಸಿದ್ಧವಿದ್ದು, ಸದ್ಯದಲ್ಲೇ ಒಪ್ಪಿಗೆ ನೀಡಲಾಗುವುದು. ಸಕ್ಕರೆ ನೀತಿಯಲ್ಲೂ ಮಾರ್ಪಾಡು ಮಾಡಲು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು.

`ಜಿಮ್~ ಕೈಪಿಡಿ: ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) ನಡೆಸುವುದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಕೈಪಿಡ್ನಿ ಸಿದ್ಧಪಡಿಸಲಾಗುವುದು. ಸಂಘಟನಾ ಸಮಿತಿ ರಚನೆ, ರೋಡ್ ಶೋ, ಅನುದಾನ ನಿಗದಿ, ಜಾಹೀರಾತು ಪ್ರಕಟಣೆ ಮತ್ತಿತರ ವಿಷಯಗಳಲ್ಲಿ ಹೇಗೆ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಈ ಕೈಪಿಡಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗುವುದು ಎಂದು ನಿರಾಣಿ ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.