ADVERTISEMENT

ಉದ್ಯಮಿ ಕೈಯಲ್ಲಿ ಖಾಸಗಿ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:57 IST
Last Updated 8 ಏಪ್ರಿಲ್ 2013, 19:57 IST

ಬೆಂಗಳೂರು: `ಧರ್ಮ, ಜಾತಿಯನ್ನು ಬದಿಗಿಟ್ಟು ಪ್ರತಿ ನಾಗರಿಕರಿಗೆ ಕಡ್ಡಾಯವಾಗಿ ಆರೋಗ್ಯ ಸೌಲಭ್ಯವನ್ನು ನೀಡುವಲ್ಲಿ ಯಶಸ್ವಿಯಾದರೆ ಪ್ರಜಾಪ್ರಭುತ್ವಕ್ಕೆ ಅರ್ಥ ದೊರೆಯುತ್ತದೆ' ಎಂದು ಭಾರತೀಯ ಸಾಮಾಜಿಕ ಮತ್ತು  ಆರ್ಥಿಕ ಬದಲಾವಣೆ ಸಂಸ್ಥೆಯ ಪ್ರಾಧ್ಯಾಪಕ ಡಾ.ಸೊಬಿನ್ ಜಾರ್ಜ್ ಅಭಿಪ್ರಾಯಪಟ್ಟರು.

ಬೆಂಗಳೂರು ಸಮಾಜ ವಿಜ್ಞಾನ ವೇದಿಕೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ `ಭಾರತದಲ್ಲಿ ಆರೋಗ್ಯ ವ್ಯವಸ್ಥೆ' ಕುರಿತು ಉಪನ್ಯಾಸ ನೀಡಿದರು.
`ಖಾಸಗಿ ಆಸ್ಪತ್ರೆಗಳ ಗುಣಮಟ್ಟಕ್ಕೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯ ರೂಪುಗೊಳ್ಳಬೇಕು. ಬದಲಿಗೆ ಖಾಸಗಿ ಆಸ್ಪತ್ರೆಗಳಿಗೆ ಪರೋಕ್ಷವಾಗಿ ಲಾಭ ಮಾಡಿಕೊಡುವ ದಿಸೆಯಲ್ಲಿ ಸರ್ಕಾರಿ ಆಸ್ಪತ್ರೆಗಳು ದಯನೀಯ ಸ್ಥಿತಿಯನ್ನು ತಲುಪಿದೆ' ಎಂದು ವಿಷಾದ ವ್ಯಕ್ತಪಡಿಸಿದರು.

`ಬಹುತೇಕ ಖಾಸಗಿ ಆಸ್ಪತ್ರೆಗಳು ಉದ್ಯಮಿ ಹಾಗೂ ರಾಜಕಾರಣಿಗಳ ಹಿಡಿತದಲ್ಲಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯೂ ಗ್ರಾಮೀಣ ಜನರಿಗೆ ಸೂಕ್ತ ಆರೋಗ್ಯ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಿದೆ. ಆದರೆ, ಇದಕ್ಕೆ ಪೂರಕವಾದ ಸಿಬ್ಬಂದಿ ಹಾಗೂ ಜನರಲ್ಲಿ ಅರಿವಿನ ಕೊರತೆಯಿದೆ' ಎಂದರು.

`ವೈದ್ಯಕೀಯ ಶಿಕ್ಷವನ್ನು ಪೂರೈಸಿದ ನಂತರ ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ದುಡಿಯಬೇಕೆಂಬ ಸರ್ಕಾರದ ನಿಯಮವೇನೋ ಸರಿಯಾಗಿಯೇ ಇದೆ. ಆದರೆ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆಯಿದೆ. ಈ ಸಮಸ್ಯೆಗೂ ಸರ್ಕಾರ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ' ಎಂದು ತಿಳಿಸಿದರು.

`ನಗರದ ಭಾಗದಲ್ಲಿರುವ ಮಧ್ಯಮವರ್ಗದ ಜನತೆಯೂ ಸಹ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಆದರೆ ಅನುಭೋಗದ ಆಧಾರದ ಮೇಲೆ ಮಧ್ಯಮ ವರ್ಗವನ್ನು ವ್ಯಾಖ್ಯಾನಿಸುವುದು ತುಸು ಕಷ್ಟ. ಗ್ರಾಮೀಣ ಭಾಗದ ಜನರಿಗಿಂತ ನಗರದಲ್ಲಿರುವ ಮಧ್ಯಮ ವರ್ಗದ ಜನತೆಯ ಆರ್ಥಿಕ ಸ್ಥಿತಿ ಸುಧಾರಣೆಗೊಂಡಿದೆ' ಎಂದು ಪ್ರತಿಕ್ರಿಯಿಸಿದರು.

ವೇದಿಕೆಯ ಅಧ್ಯಕ್ಷ ಎ.ಜೆ.ಸದಾಶಿವ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.