ADVERTISEMENT

ಉದ್ಯಾನದಲ್ಲೇ ಮಗುವಿಗೆ ಜನ್ಮ, ತಾಯಿ ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಬೆಂಗಳೂರು: ವಾಯು ವಿಹಾರಕ್ಕೆ ಹೋಗಿದ್ದ ಗರ್ಭಿಣಿಯೊಬ್ಬರು ಉದ್ಯಾನದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ ದಾರುಣ ಘಟನೆ ಕಮಲಾನಗರ ಸಮೀಪದ ಶಕ್ತಿಗಣಪತಿ ನಗರದಲ್ಲಿ ಭಾನುವಾರ ಸಂಭವಿಸಿದೆ.

ಕಮಲಾನಗರದ ನಿವಾಸಿ ಪೂರ್ಣಿಮಾ (35) ಮೃತಪಟ್ಟವರು. ಅವರು ಬೆಳಿಗ್ಗೆ 10.30ರ ಸುಮಾರಿಗೆ ತನ್ನ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಮನೆಯ ಸಮೀಪದ ಉದ್ಯಾನಕ್ಕೆ ವಾಯುವಿಹಾರ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.

ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಪೂರ್ಣಿಮಾ ಅವರು ತೀವ್ರ ರಕ್ತ ಸ್ರಾವದಿಂದಾಗಿ ಪ್ರಜ್ಞೆ ಕಳೆದುಕೊಂಡರು. ಈ ವೇಳೆ ಅವರ ಹೆಣ್ಣು ಮಗು ನವಜಾತ ಶಿಶುವಿನ ಮೇಲೆ ಮರಳು ಹಾಕಿ ಆಟವಾಡಲಾರಂಭಿಸಿದೆ.

`ಹೆಣ್ಣು ಮಗುವೊಂದು ಶಿಶುವಿನ ಮೇಲೆ ಮರಳು ಹಾಕಿ ಆಟವಾಡುತ್ತಿತ್ತು. ಮಗು ಸಾವನ್ನಪ್ಪಿರಬಹುದು ಎಂಬ ಆತಂಕದಿಂದ ಹತ್ತಿರ ಹೋದಾಗ ಮಗು ಇನ್ನು ಉಸಿರಾಡುತ್ತಿತ್ತು. ಕೂಡಲೇ ತಾಯಿ ಹಾಗೂ ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇಬ್ಬರನ್ನೂ ವಾಣಿ ವಿಲಾಸ ಆಸ್ಪತ್ರೆಗೆ ವರ್ಗಾಯಿಸುವಂತೆ ಖಾಸಗಿ ಆಸ್ಪತ್ರೆಯ ವೈದ್ಯರು ಆದೇಶಿಸಿದ ಹಿನ್ನೆಲೆಯಲ್ಲಿ ಅವರನ್ನು ವಾಣಿ ವಿಲಾಸ ಆಸ್ಪತ್ರೆಗೆ ಕೊಂಡೊಯ್ಯುವಾಗ ತಾಯಿ ಸಾವನ್ನಪ್ಪಿದರು~ ಎಂದು ಪಾಲಿಕೆಯ ಸ್ಥಳೀಯ ಸದಸ್ಯರೊಬ್ಬರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ತಿಳಿಸಿದರು.

`ಆಸ್ಪತ್ರೆಗೆ ಬರುವ ಮೊದಲೇ ತಾಯಿ ಸಾವನ್ನಪ್ಪಿದ್ದರು. ಮಗು 3.3 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ. ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ~ ಎಂದು  ಡಾ. ಎನ್. ಬಿ.ಶಕುಂತಲಾ ತಿಳಿಸಿದರು.

`ಬಡಗಿಯಾಗಿದ್ದ ರಮೇಶ್ ಅವರನ್ನು ವಿವಾಹವಾಗಿದ್ದ ಪೂರ್ಣಿಮಾ ಮೂರು ವರ್ಷದಿಂದ ಪತಿಯಿಂದ ದೂರ ಉಳಿದಿದ್ದರು. ಅಕ್ಕಲಕ್ಷ್ಮಿಯೊಂದಿಗೆ ಕಮಲಾನಗರದಲ್ಲಿ ವಾಸಿಸುತ್ತಿದ್ದರು~ ಎಂದು ಪೊಲೀಸರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.