ಬೆಂಗಳೂರು: ದೇಶದಲ್ಲಿ ನಾಲ್ಕು ಮಂದಿ ಉದ್ಯೋಗಸ್ಥ ಮಹಿಳೆಯರಲ್ಲಿ ಮೂವರು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಅಸೋಚಾಮ್) ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.
ಕಾರ್ಪೋರೇಟ್ ವಲಯದಲ್ಲಿ ಕಾರ್ಯನಿರ್ವಹಿಸುವ ಶೇ 78ಮಂದಿ ಮಹಿಳೆಯರು ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದು, ಇವರಲ್ಲಿ 32 ರಿಂದ 58ರ ವಯೋಮಿತಿಯಲ್ಲಿರುವ ಮಹಿಳೆಯರೇ ಹೆಚ್ಚಿದ್ದಾರೆ. ಸುಮಾರು 120 ಕಾರ್ಪೋರೇಟ್ ಕಂಪೆನಿಗಳಲ್ಲಿ ಸುಮಾರು 2, 800 ಮಹಿಳೆಯರನ್ನು ಸಂದರ್ಶನ ಮಾಡಲಾಗಿದೆ. ಆಧುನಿಕ ಜೀವನ ಶೈಲಿಯಿಂದಾಗಿ ಶೇ 42 ಮಂದಿ ಬೆನ್ನುನೋವು, ಸ್ಥೂಲಕಾಯ, ಖಿನ್ನತೆ, ಮಧುಮೇಹ, ರಕ್ತದ ಒತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇವರಲ್ಲಿ ಹಲವು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.
ಸಮೀಕ್ಷೆಯನ್ನು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಜೈಪುರ, ಕೋಲ್ಕತ್ತಾ, ಲಖನೌ, ಮುಂಬೈ, ಪುಣೆ ಸೇರಿದಂತೆ 10 ಮಹಾನಗರಗಳಲ್ಲಿ ಕೈಗೊಳ್ಳಲಾಗಿದೆ. ಐಟಿ, ಬಿಟಿ ವಲಯ (ಶೇ 17), ಹಣಕಾಸು ಸೇವಾ ವಿಭಾಗ (ಶೇ 11), ಎಂಜಿನಿಯರ್ ವೃತ್ತಿ (ಶೇ 9), ಮಾಹಿತಿ ತಂತ್ರಜ್ಞಾನ ಕ್ಷೇತ್ರ (ಶೇ 8), ಬಿಪಿಓ, ಕೆಪಿಓ ಹಾಗೂ ಮಾಧ್ಯಮ(ಶೇ 6) ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಸೋಚಾಮ್‌ನ ಹೆಚ್ಚುವರಿ ನಿರ್ದೇಶಕಿ ಮಂಜು ನೇಗಿ ಹೇಳಿದರು.
ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರು ಉದ್ಯೋಗ ಅಭದ್ರತೆ, ವೈದ್ಯಕೀಯ ಭತ್ಯೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.