ADVERTISEMENT

ಉದ್ಯೋಗ ಆಮಿಷ ₨ 3 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಿ.ಇ ಪಧವೀದರರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ‘ಲೈಫ್‌ ಟೈಮ್‌ ಸಾಫ್ಟ್‌–ಟೆಕ್‌’ ಎಂಬ ಸಾಫ್ಟ್‌ವೇರ್‌ ಕಂಪೆನಿ ವಿರುದ್ಧ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ.

‌ಈ ಸಂಬಂಧ ಶಿವುಕುಮಾರ್‌ ಎಂಬುವರು ದೂರು ಕೊಟ್ಟಿದ್ದಾರೆ. ‘ಕೋರಮಂಗಲದ ಐದನೇ ಬ್ಲಾಕ್‌ನಲ್ಲಿರುವ ‘ಲೈಫ್‌ ಟೈಮ್‌ ಸಾಫ್ಟ್‌–ಟೆಕ್‌’ ಎಂಬ ಕಂಪೆನಿಯು ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿ ಆನ್‌ಲೈನ್‌ ಉದ್ಯೋಗ ಮಾಹಿತಿ ತಾಣ ‘ನೌಕರಿ ಡಾಟ್‌ ಕಾಂ’ ಮತ್ತು ಒಎಲ್‌ಎಕ್ಸ್‌ ಕ್ಲಾಸಿಫೈಡ್‌ನಲ್ಲಿ ಜಾಹೀರಾತು ನೀಡಿತ್ತು. ಅಭ್ಯರ್ಥಿಗಳು ಕಂಪೆನಿ ಹೆಸರಿನಲ್ಲಿ ₨ 1 ಲಕ್ಷದ ಡಿ.ಡಿ ತೆಗೆದು ಠೇವಣಿ ಇಡಬೇಕು. ನಾಲ್ಕು ತಿಂಗಳ ತರಬೇತಿ ನಂತರ ವೇತನ ಸಹಿತ ಠೇವಣಿ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ತಿಳಿಸಿತ್ತು.

ಆ ಜಾಹೀರಾತನ್ನು ನೋಡಿದ ಸುಮಾರು 300 ಪಧವೀದರರು, ತಲಾ ₨ 1 ಲಕ್ಷ ಠೇವಣಿ ಇಟ್ಟಿದ್ದಾರೆ. ಆದರೆ, ಮಂಗಳವಾರ ಮಧ್ಯಾಹ್ನ­ದಿಂದ ಆ ಕಂಪೆನಿಯನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ್ದಾರೆ. ‘ಕಂಪೆನಿಯ ವ್ಯವಸ್ಥಾಪಕ ಖಾದರ್‌ ವಾಲಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ್‌ ನಾಗೇಂದ್ರ, ಜಾವಿದ್ ಬಾಷಾ, ಮಾನವ ಸಂಪನ್ಮೂಲ ವಿಭಾಗದ ನಾಗಶ್ರೀ ಎಂಬುವರು ನಾಪತ್ತೆಯಾಗಿದ್ದು, ಮೊಬೈಲ್‌ಗಳೂ ಸ್ವಿಚ್‌ ಆಫ್‌ ಆಗಿವೆ’ ಎಂದು ದೂರಿದ್ದಾರೆ.

‘₨ 1 ಲಕ್ಷ ಠೇವಣಿ ಇಟ್ಟು ಉದ್ಯೋಗಕ್ಕೆ ಸೇರಿದರೆ, ಅವರು ಪ್ರತಿ ತಿಂಗಳು 25 ರಿಂದ 30 ಸಾವಿರ ವೇತನ ಪಡೆಯಬಹುದು ಎಂದು ಜಾಹೀರಾತಿನಲ್ಲಿ ತಿಳಿಸಿದ್ದರು. ಹೀಗಾಗಿ ನಾನು ಹಣ ಠೇವಣಿ ಇಟ್ಟಿದ್ದೆ. ಆರು ತಿಂಗಳಿಂದ ಈ ಕಂಪೆನಿ ಕಾರ್ಯ ನಿರ್ವಹಿಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಕಚೇರಿಗೆ ಬಂದ ವ್ಯವಸ್ಥಾಪಕ ಖಾದರ್‌ ವಾಲಿ, ಸಂಜೆ 4 ಗಂಟೆಗೆ ಬರುವುದಾಗಿ ಹೇಳಿ ಹೋದರು.

ಆದರೆ, ನಂತರ ಅವರ ಮೊಬೈಲ್‌ಗೆ ಕರೆ ಮಾಡಿದರೆ, ‘ಕಂಪೆನಿಗೆ ಯಾವುದೇ ಪರವಾನಗಿ ಇಲ್ಲ. ಇದು ರಾಜೂರೆಡ್ಡಿ ಎಂಬು­ವರಿಗೆ ಸೇರಿದ್ದು. ಅವರು ನಿಮ್ಮಿಂದ ಹಣ ಪಡೆದು  ವಂಚಿಸುತ್ತಿದ್ದಾರೆ’ ಎಂದು ಹೇಳಿ ಕರೆ ಸ್ಥಗಿತ­ಗೊಳಿಸಿದರು. ಆ ನಂತರ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಯಿತು’ ಎಂದು ವಂಚನೆಗೊಳಗಾದ ವಿದ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಒಡಿಶಾ, ಅಸ್ಸಾಂ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆಯಿಂದ ಅಭ್ಯರ್ಥಿಗಳು ಠೇವಣಿ ಇಟ್ಟಿದ್ದು, ಸುಮಾರು ₨ 3 ಕೋಟಿ ವಂಚನೆಯಾಗಿದೆ. ಈ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರನ್ನು ಭೇಟಿಯಾಗಿ ದೂರು ಕೊಟ್ಟಿದ್ದೇವೆ ಎಂದು ವಿದ್ಯಾ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.