ADVERTISEMENT

ಉಪ ಲೋಕಾಯುಕ್ತರಿಂದ ಆಸ್ಪತ್ರೆಗೆ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:05 IST
Last Updated 15 ಸೆಪ್ಟೆಂಬರ್ 2011, 19:05 IST

ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ.ಮಜಗೆ ಅವರು ಗುರುವಾರ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಿಗ್ಗೆ ತಮ್ಮ ಕೆಲ ಸಿಬ್ಬಂದಿಯೊಂದಿಗೆ ಪೂರ್ವಸೂಚನೆ ಇಲ್ಲದೇ ವಿಕ್ಟೋರಿಯಾ ಆಸ್ಪತ್ರೆಗೆ ಧಾವಿಸಿದ ನ್ಯಾ. ಮಜಗೆ, ಅಲ್ಲಿನ ಸಾಮಾನ್ಯ ವಾರ್ಡ್ ಮತ್ತು ತೀವ್ರನಿಗಾ ಘಟಕಕ್ಕೆ ಭೇಟಿ ನೀಡಿದರು.

ರೋಗಿಗಳೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಚಿಕಿತ್ಸೆ ಮತ್ತು ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.

ಉಪ ಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯೊಬ್ಬರು ತೀವ್ರನಿಗಾ ಘಟಕಕ್ಕೆ ದಾಖಲಾಗಲು ಬಂದಿದ್ದರು. ಖುದ್ದಾಗಿ ಅವರನ್ನು ವಿಚಾರಿಸಿದ ಮಜಗೆ ಅವರು, ರೋಗಿಯನ್ನು ದಾಖಲು ಮಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಸ್ಪತ್ರೆಯಿಂದ ನಿರ್ಗಮಿಸುವ ಮುನ್ನ ಸದರಿ ವ್ಯಕ್ತಿಯನ್ನು ದಾಖಲು ಮಾಡಿಕೊಂಡಿರುವ ಬಗ್ಗೆ ಖಚಿತಪಡಿಸಿಕೊಂಡರು.

ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಅವರು, `ಸಾರ್ವಜನಿಕ ಆಸ್ಪತ್ರೆಗಳ ಸ್ಥಿತಿಯನ್ನು ಅರಿಯಲು ದಿಢೀರ್ ಭೇಟಿ ನೀಡಿದ್ದೇನೆ. ಆಸ್ಪತ್ರೆಯಲ್ಲಿರುವ ರೋಗಿಗಳನ್ನು ವಿಚಾರಿಸಿ ಮಾಹಿತಿ ಪಡೆದಿದ್ದೇನೆ. ಯಾವುದೇ ಗಂಭೀರ ಸಮಸ್ಯೆಗಳು ಕಂಡು ಬರಲಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.