ADVERTISEMENT

ಉಸಿರುಗಟ್ಟಿಸಿ ವೃದ್ಧೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:45 IST
Last Updated 22 ಮಾರ್ಚ್ 2014, 19:45 IST

ಬೆಂಗಳೂರು: ರಾಜರಾಜೇಶ್ವರಿನಗರದ ಶುಭೋದಯ ಅಪಾರ್ಟ್‌ಮೆಂಟ್‌ನಲ್ಲಿ ದುಷ್ಕರ್ಮಿಗಳು ಎಪ್ಪತ್ತು ವರ್ಷದ ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಒಂದು ವರ್ಷ­ದಿಂದ ವಾಸವಿದ್ದ ರಮಾ ದೊರೈ­ಮಣಿ ಕೊಲೆಯಾದವರು. ಮೂಲತಃ ಚೆನ್ನೈನ ಅವರಿಗೆ ಮೂವರು ಮಕ್ಕಳಿ­ದ್ದಾರೆ. ಇಬ್ಬರು ಗಂಡು ಮಕ್ಕಳು ವಿದೇಶ­ದಲ್ಲಿ ಹಾಗೂ ಮಗಳು ಚೆನ್ನೈನಲ್ಲಿ ವಾಸ­ವಿ­­ದ್ದಾರೆ. ಅವರ ಪತಿ 30 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಸಂಬಂಧಿ ಆದಿತ್ಯ ಎಂಬುವರು ಶನಿವಾರ ಅವರ ಫ್ಲ್ಯಾಟ್‌ಗೆ ಕರೆ ಮಾಡಿ­ದ್ದಾರೆ. ಎಷ್ಟು ಬಾರಿ ಪ್ರಯತ್ನಿಸಿ­ದರೂ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನ­ಗೊಂಡ ಆದಿತ್ಯ ಸಂಜೆ 5 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
‘ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಶುಕ್ರ­ವಾರ ಬೆಳಿಗ್ಗೆ ರಮಾ ಅವರ ಭೇಟಿಗೆ ಬಂದಿದ್ದ. ರಮಾ ಅವರ ಫ್ಲ್ಯಾಟ್‌ಗೆ ಕರೆ ಮಾಡಿ ಈ ವಿಷಯ ತಿಳಿಸಿದೆ.

ಅವರು ಆ ಇಬ್ಬ­ರನ್ನು ಒಳಗೆ ಕಳಿಸುವಂತೆ ತಿಳಿಸಿ­ದರು. ಸುಮಾರು 4ಗಂಟೆಗಳ ಬಳಿಕ ಅವರಿಬ್ಬರು ಹೊರಗೆ ಹೋದರು. ಆ ನಂತರ ರಮಾ ಅವರು ಫ್ಲ್ಯಾಟ್‌ನಿಂದ ಹೊರ ಬಂದಿರಲಿಲ್ಲ’ ಎಂದು ಅಪಾರ್ಟ್‌­ಮೆಂಟ್‌ನ ಕಾವಲುಗಾರ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಮಾ ಅವರ ಭೇಟಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಅವರ ಮೈಮೇಲಿದ್ದ ಚಿನ್ನದ ಸರ, ಕಿವಿಯ ಓಲೆ ಹಾಗೂ ಬಳೆಗಳನ್ನು ದುಷ್ಕರ್ಮಿಗಳು ಕದ್ದೊಯ್ದಿ­ದ್ದಾರೆ. ಪರಿಚಿತರೇ ಹಣಕ್ಕಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀ­ಸರು ಹೇಳಿದ್ದಾರೆ. ರಾಜರಾಜೇ­ಶ್ವರಿ­ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.