ADVERTISEMENT

ಎಂಬಿಬಿಎಸ್ 380 ಸೀಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST
ಎಂಬಿಬಿಎಸ್ 380 ಸೀಟು ಹೆಚ್ಚಳ
ಎಂಬಿಬಿಎಸ್ 380 ಸೀಟು ಹೆಚ್ಚಳ   

ಬೆಂಗಳೂರು: ಹೊಸದಾಗಿ ಎರಡು ಕಾಲೇಜುಗಳ ಸ್ಥಾಪನೆ ಮತ್ತು ಮೂರು ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಈ ವರ್ಷ ವೈದ್ಯಕೀಯ ಪದವಿ (ಎಂಬಿಬಿಎಸ್) ಕೋರ್ಸ್‌ನಲ್ಲಿ ಒಟ್ಟು 380 ಸೀಟುಗಳು ಹೆಚ್ಚಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಬುಧವಾರ ಇಲ್ಲಿ ಹೇಳಿದರು.

ಭಾರತೀಯ ವೈದ್ಯಕೀಯ ಮಂಡಳಿ ಮತ್ತು ದಂತ ವೈದ್ಯಕೀಯ ಮಂಡಳಿ ಪ್ರಸಕ್ತ ಸಾಲಿನ (2012-13) ವೈದ್ಯಕೀಯ/ದಂತ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ನಿಗದಿ ಮಾಡಿದೆ. ವೈದ್ಯಕೀಯ ವಿಭಾಗದಲ್ಲಿ ಒಟ್ಟು 5,935 (ಕಳೆದ ವರ್ಷ 5,555) ಮತ್ತು ದಂತ ವೈದ್ಯಕೀಯ ವಿಭಾಗದಲ್ಲಿ 2,990 ಸೀಟುಗಳು ಲಭ್ಯವಾಗಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ನಗರಕ್ಕೆ ಮಂಜೂರು ಮಾಡಿರುವ ಇಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ 100 ಸೀಟುಗಳು ಹಾಗೂ ಶಿವಮೊಗ್ಗದಲ್ಲಿ ತಡಿಕೆಲ ಸುಬ್ಬಯ್ಯ ಟ್ರಸ್ಟ್ ಈ ವರ್ಷ ಆರಂಭಿಸಿರುವ ವೈದ್ಯಕೀಯ ಕಾಲೇಜಿನಲ್ಲಿ 150 ಸೀಟುಗಳು ಲಭ್ಯವಾಗಲಿವೆ. ಇವೆರಡೂ ಹೊಸ ಕಾಲೇಜುಗಳಾಗಿವೆ.

ನಗರದ ಕೆಂಪೇಗೌಡ ವೈದ್ಯಕೀಯ ಕಾಲೇಜು, ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜಿನಲ್ಲಿ ತಲಾ 30 ಹಾಗೂ ಮಂಗಳೂರಿನ ಫಾದರ್ ಮುಲ್ಲಾ ವೈದ್ಯಕೀಯ ಕಾಲೇಜಿನಲ್ಲಿ 50 ಸೀಟುಗಳು ಹೆಚ್ಚಾಗಿವೆ. ಒಟ್ಟಾರೆ ಹೆಚ್ಚಳವಾಗಿರುವ 380 ಸೀಟುಗಳ ಪೈಕಿ ಸರ್ಕಾರಿ ಕೋಟಾ, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕೋಟಾದಡಿ ತಲಾ 100 ಹಾಗೂ ಕಾಮೆಡ್-ಕೆ ಮೂಲಕ 180 ಸೀಟುಗಳು ದೊರೆಯಲಿವೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) 15,776 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಆದರೆ ಸರ್ಕಾರಿ ಕೋಟಾದಡಿ 2,222 ಸೀಟುಗಳು ಮಾತ್ರ ದೊರೆಯಲಿವೆ. ಇನ್ನು ಕಾಮೆಡ್-ಕೆ ಮೂಲಕ 914, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಕೋಟಾ ಮೂಲಕ 1084 ಸೀಟುಗಳು ಲಭ್ಯವಾಗಿವೆ.

ಪ್ರವರ್ಗವಾರು ಸೀಟು ಹಂಚಿಕೆ ಪಟ್ಟಿ ಇದೇ 11ರಂದು ಪ್ರಕಟವಾಗಲಿದೆ. ಇದೇ 12ರಿಂದ 18ರವರೆಗೆ ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜು, ಕೋರ್ಸ್‌ಗಳ ಆದ್ಯತೆಯನ್ನು ಆನ್‌ಲೈನ್ ಮೂಲಕ ಗುರುತಿಸಬೇಕು. ಇದೇ 20ರಂದು ಅಣಕು ಸೀಟು ಹಂಚಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.

ಮೊದಲು ಗುರುತಿಸಿರುವ ಆದ್ಯತೆಗಳಲ್ಲಿ ಏನಾದರೂ ಬದಲಾವಣೆ ಇದ್ದರೆ ಇದೇ 21 ಮತ್ತು 22ರಂದು ಮಾಡಬಹುದು. 23ರಂದು ಆನ್‌ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಸೀಟು ಆಯ್ಕೆ ಮಾಡಿಕೊಂಡವರು ಇದೇ 30ರ ಒಳಗೆ ಪ್ರವೇಶ ಪಡೆಯಬೇಕು. ಪ್ರವೇಶ ಪಡೆದ ವಿದ್ಯಾರ್ಥಿಗಳ ವಿವರಗಳನ್ನು 31ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.

ಕಾಮೆಡ್-ಕೆ: ಇದೇ 21 ಮತ್ತು 22ರಂದು ಕಾಮೆಡ್-ಕೆ ಮೊದಲ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ. ಇದೇ 15ರಂದು ಕರ್ನಾಟಕ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕೋಟಾದ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಯಲಿದೆ.

ಎರಡನೇ ಸುತ್ತು: ಆಗಸ್ಟ್ 2ರಂದು ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕೋಟಾದ ಸೀಟುಗಳ ಹಂಚಿಕೆಗೆ ಹಾಗೂ ಆ. 5 ಮತ್ತು 6ರಂದು ಕಾಮೆಡ್-ಕೆ ಕೋಟಾದ ಸೀಟುಗಳ ಹಂಚಿಕೆಗೆ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ. ಆ. 7ರ ನಂತರ ಸರ್ಕಾರಿ ಕೋಟಾ ಸೀಟುಗಳ ಹಂಚಿಕೆಗೆ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸಲು ಉದ್ದೇಶಿಸಲಾಗಿದೆ. ಆ.30 ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸೆಪ್ಟೆಂಬರ್ ಒಂದರಂದು ತರಗತಿಗಳು ಪ್ರಾರಂಭವಾಗಲಿವೆ ಎಂದು ಅವರು ತಿಳಿಸಿದರು.

ಕಾಮೆಡ್-ಕೆ ಮತ್ತು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಕೋಟಾದ ಸೀಟುಗಳ ಭರ್ತಿಗೆ ನಡೆಯುವ ಕೌನ್ಸೆಲಿಂಗ್ ಸಂದರ್ಭದಲ್ಲಿ ನಕಲಿ ಅಂಕಪಟ್ಟಿಗಳನ್ನು ನೀಡಿ ಪ್ರವೇಶ ಪಡೆಯುವುದನ್ನು ತಪ್ಪಿಸುವ ದೃಷ್ಟಿಯಿಂದ ಕೌನ್ಸೆಲಿಂಗ್ ಕೇಂದ್ರಕ್ಕೆ ಸರ್ಕಾರದ ಪ್ರತಿನಿಧಿ ಮತ್ತು ಕಾನೂನು ಸಲಹೆಗಾರರನ್ನು ನಿಯೋಜಿಸಲಾಗುತ್ತದೆ. ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಲಾಗುವುದು ಎಂದರು.

ಆಯೋಗ ರಚನೆ: ಪ್ರವೇಶದ ಮೇಲ್ವಿಚಾರಣೆಗಾಗಿ ಶಿವಮೊಗ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವೆಂಕಟರಾಮಯ್ಯ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆಯೋಗಕ್ಕೆ ಕಚೇರಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ವರ್ಷದಿಂದ ಮೈಸೂರು, ಹುಬ್ಬಳ್ಳಿ ಮತ್ತು ಬಳ್ಳಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು 150ರಿಂದ 250ಕ್ಕೆ ಹಾಗೂ ಉಳಿದ ಕಾಲೇಜುಗಳಲ್ಲಿ 100ರಿಂದ 150ಕ್ಕೆ ಏರಿಸುವಂತೆ ಶೀಘ್ರದಲ್ಲೇ ಭಾರತೀಯ ವೈದ್ಯಕೀಯ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಗಸ್ಟ್ 15ರ ಒಳಗೆ ಜೆನರಿಕ್ ಔಷಧಿ ಮಳಿಗೆಗಳನ್ನು ಆರಂಭಿಸಲಾಗುವುದು ಎಂದರು.

ಮೇಲ್ದರ್ಜೆಗೆ: ರಾಜ್ಯದ ಹತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸಂಶೋಧನಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲು 1,275 ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ಶೇ 80ರಷ್ಟನ್ನು ಕೇಂದ್ರ ಮತ್ತು ಶೇ 20ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದರು.

 280 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳುಗಳ ಚಿಕಿತ್ಸೆಗಾಗಿ ತುರ್ತು ವೈದ್ಯಕೀಯ ಸೇವೆ ಮತ್ತು ವಿಪತ್ತು ಘಟಕ ತೆರೆಯಲಾಗುವುದು. ಇಲ್ಲಿ ಹತ್ತು ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಬೆಡ್‌ಗಳನ್ನು ಸದಾ ಖಾಲಿ ಇಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.