ADVERTISEMENT

ಎಂ.ಸಿ.ಬಡಾವಣೆ: ನಾಲ್ಕು ಮರಗಳ ಹನನ

ಕೆಲವು ಕೊಂಬೆಗಳು ಬಾಗಿದ್ದಕ್ಕೆ ಮರದ ಬುಡವನ್ನೇ ಕತ್ತರಿಸಿದ ಬಿಬಿಎಂಪಿ: ಸ್ಥಳೀಯ ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಎಂ.ಸಿ.ಬಡಾವಣೆ: ನಾಲ್ಕು ಮರಗಳ ಹನನ
ಎಂ.ಸಿ.ಬಡಾವಣೆ: ನಾಲ್ಕು ಮರಗಳ ಹನನ   

ಬೆಂಗಳೂರು: ಗೋವಿಂದರಾಜನಗರ ವಿಧಾನ ಸಭಾಕ್ಷೇತ್ರದ ಎಂ.ಸಿ.ಬಡಾವಣೆಯಲ್ಲಿ ನಾಗರಬಾವಿ ರಸ್ತೆ ಪಕ್ಕದ ನಾಲ್ಕು ಗುಲ್‌ಮೊಹರ್‌ ಮರಗಳನ್ನು ಭಾನುವಾರ ಕಡಿಯಲಾಗಿದೆ. ಐದು ಮರಗಳ ಕೊಂಬೆಗಳನ್ನು ಕತ್ತರಿಸಲಾಗಿದ್ದು, ಈ ಮರಗಳೂ ಬಹುತೇಕ ಬೋಳಾಗಿವೆ.

‘ಈ ರಸ್ತೆಯ ಮೇಲೆ ಬಾಗಿದ್ದ ಕೊಂಬೆಯೊಂದು  ನಾಲ್ಕು ದಿನಗಳ ಹಿಂದೆ ಬಸ್ಸೊಂದಕ್ಕೆ ತಾಗಿತ್ತು.  ಬಸ್‌ ಏಕಾಏಕಿ ನಿಂತಿದ್ದರಿಂದ ಹಿಂದಿನಿಂದ ಬರುತ್ತಿದ್ದ ಬೈಕ್‌ ಸವಾರರೊಬ್ಬರು ಅದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು  ಗಾಯಗೊಂಡಿದ್ದರು.

ಈ ಬಳಿಕ  ರಸ್ತೆಗೆ ಬಾಗಿರುವ ಮರಗಳನ್ನು ತೆರವುಗೊಳಿಸುವಂತೆ ಸಂಚಾರ ಪೊಲೀಸರು ಹಾಗೂ ಸ್ಥಳೀಯರು ಒತ್ತಾಯಿಸಿದ್ದರು. ಹಾಗಾಗಿ ಇಂದು ಕೊಂಬೆಗಳನ್ನು ಕಡಿಯಲಾಗಿದೆ. ಅಪಾಯದ ಸ್ಥಿತಿಯಲ್ಲಿದ್ದ ಮರಗಳನ್ನೂ ಕತ್ತರಿಸಲಾಗಿದೆ’ ಎಂದು ಸ್ಥಳೀಯ ಪಾಲಿಕೆ ಸದಸ್ಯ ಉಮೇಶ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಾಗರಬಾವಿ ರಸ್ತೆ ಪಕ್ಕದಲ್ಲಿರುವ ಗೆದ್ದಲು ಹಿಡಿದಿರುವ ಮರಗಳನ್ನು ಕತ್ತರಿಸಲು ಅನುಮತಿ ನೀಡಿದ್ದೇನೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಸರವಾಯಿತು: ‘ಈ ಮಾರ್ಗದಲ್ಲಿ ನಾನು ನಿತ್ಯವೂ ಸಂಚರಿಸುತ್ತೇನೆ. ಈ ರಸ್ತೆಯ ಮೇಲೆ ದಟ್ಟ ಹಸಿರು ಆವರಿಸಿರುವುದರಿಂದ ಇಲ್ಲಿ ಹೋಗುವಾಗ ಖುಷಿಯಾಗುತ್ತಿತ್ತು. ಈ ಮಾರ್ಗವನ್ನು ಬಳಸಲು ನನ್ನಂತೆಯೇ ಅನೇಕ ಬೈಕ್‌ ಸವಾರರು, ಇಷ್ಟಪಡುತ್ತಿದ್ದರು. ಮರಗಳನ್ನು ಕಡಿದಿರುವುದನ್ನು ನೋಡಿ ಬೇಸರವಾಯಿತು’ ಎಂದು ಕೆಎಚ್‌ಬಿ ಕಾಲೊನಿಯ ಸಚಿನ್‌ ಅವರು ಬೇಸರ ವ್ಯಕ್ತಪಡಿಸಿದರು.

‘ಇಲ್ಲಿ ಕೆಲವು ಕೊಂಬೆಗಳು ರಸ್ತೆಗೆ ಬಾಗಿದ್ದುದು ನಿಜ. ಆ ಕಾರಣಕ್ಕೆ ಮರದ ಬುಡವನ್ನೇ ಕತ್ತರಿಸುವ ಅಗತ್ಯ ಇರಲಿಲ್ಲ. ಕೊಂಬೆಗಳನ್ನು ಮಾತ್ರ ಕತ್ತರಿಸಿದ್ದರೆ ಸಾಕಿತ್ತು.  ಯಂತ್ರದ ಸಹಾಯದಿಂದ  ಮರವನ್ನು ಅರೆಗಳಿಗೆಯಲ್ಲಿ  ಕತ್ತರಿಸಿ ಧರೆಗೆ ಉರುಳಿಸುವುದು ಸುಲಭ. ಇವುಗಳನ್ನು ಬೆಳೆಸಲು ಅನೇಕ ವರ್ಷಗಳೇ ತಗುಲಿವೆ ಎಂಬುದನ್ನು ನಾವು ಮರೆಯಬಾರದು’ ಎಂದರು.

‘ಇಲ್ಲೇ ಪಕ್ಕದ ಮಾಗಡಿ ರಸ್ತೆಯಲ್ಲಿ ಕೆಳ ಸೇತುವೆ ನಿರ್ಮಿಸಲು ರಹೇಜ ಪಾರ್ಕ್‌ ಬಳಿ ಮೂರು ಭಾರಿ ಗಾತ್ರದ ಮರಗಳನ್ನು ವರ್ಷದ ಹಿಂದೆ ಕಡಿಯಲಾಗಿತ್ತು. ಆಗ ಯಾರೂ ಧ್ವನಿ ಎತ್ತಲಿಲ್ಲ. ಈಗ ನಾಗರಬಾವಿ ರಸ್ತೆಯ ಮರಗಳನ್ನು ಕಡಿಯಲಾಗಿದೆ. ಈಗಲೂ ಜನ ಸುಮ್ಮನಿದ್ದರೆ, ಈ ರಸ್ತೆಯೂ ಮುಂದೆ ಬೋಳುಬೋಳಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

***

‘ಬೇಜವಾಬ್ದಾರಿ  ವರ್ತನೆ’
‘ಬಾಗಿದ್ದ ಕೊಂಬೆ  ಬಸ್‌ಗೆ ತಾಗಿದ್ದರೆ, ಆ ಕೊಂಬೆಯನ್ನು ಮಾತ್ರ ಕತ್ತರಿಸಲಿ. ಅದರ ಜೊತೆಗೆ ಮಾರ್ಗದ ಉದ್ದಕ್ಕೂ ನಾಲ್ಕು ಮರಗಳನ್ನು ಕಡಿದದ್ದು ಬೇಜವಾಬ್ದಾರಿಯ ಪರಮಾವಧಿ’ ಎಂದು ಬಿಬಿಎಂಪಿ ವೃಕ್ಷ ಸಮಿತಿ ಸದಸ್ಯ ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಪಾಯದ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಗುರುತಿಸಿ ಮಳೆಗಾಲಕ್ಕೆ ಮುನ್ನವೇ,    ಕತ್ತರಿಸಿದರೆ ಇಂತಹ ಪರಿಸ್ಥಿತಿ ಎದುರಾಗದು. ನಗರದಲ್ಲಿರುವ ಒಂದೊಂದು ಮರವೂ ಅಮೂಲ್ಯ. ಅವುಗಳನ್ನು ಉಳಿಸಿಕೊಳ್ಳುವುದು ನಗರದ ಪ್ರತಿಯೊಬ್ಬ ನಿವಾಸಿಯ ಕರ್ತವ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.