ADVERTISEMENT

ಎಐಐಬಿಯಿಂದ ₹ 2,150 ಕೋಟಿ ಸಾಲ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:42 IST
Last Updated 13 ಡಿಸೆಂಬರ್ 2017, 19:42 IST
ಎಐಐಬಿಯಿಂದ ₹ 2,150 ಕೋಟಿ ಸಾಲ
ಎಐಐಬಿಯಿಂದ ₹ 2,150 ಕೋಟಿ ಸಾಲ   

ಬೆಂಗಳೂರು: ‘ನಮ್ಮ ಮೆಟ್ರೋ’ ಯೋಜನೆಯ ಎರಡನೇ ಹಂತದ ಗೊಟ್ಟಿಗೆರೆ– ನಾಗವಾರ (ರೀಚ್‌ 6) ಮಾರ್ಗದ ಕಾಮಗಾರಿಗೆ  ₹ 2,150 ಕೋಟಿ ಸಾಲ ಒದಗಿಸಲು ಏಷ್ಯನ್‌ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ (ಎಐಐಬಿ) ಒಪ್ಪಿಗೆ ನೀಡಿದೆ.

‘ಶೇ 100ರಷ್ಟು ವಿದ್ಯುತ್‌ಚಾಲಿತ ಮೆಟ್ರೋ ರೈಲು ಸೇವೆಯನ್ನು ಒದಗಿಸಲಿರುವ ಈ ಯೋಜನೆಗೆ ಹಣಕಾಸಿನ ನೆರವು ಒದಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ’ ಎಂದು ಬ್ಯಾಂಕ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘ಭಾರತದ ಮೂರನೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಸೌಕರ್ಯ ಕಲ್ಪಿಸಲು ಈ ಯೋಜನೆ ನೆರವಾಗಲಿದೆ. ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲಿದೆ. ಹಾಗಾಗಿ ಈ ಯೋಜನೆಯಲ್ಲಿ ನಾವು ಹೂಡಿಕೆ ಮಾಡಲಿದ್ದೇವೆ. ಇಂಧನ ಉಳಿತಾಯಕ್ಕೆ ಈ ಯೋಜನೆ ಪೂರಕವಾಗಿದೆ. ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯವನ್ನು ತಗ್ಗಿಸಲಿದೆ. ಬೆಂಗಳೂರನ್ನು ಜನಜೀವನಕ್ಕೆ ಇನ್ನಷ್ಟು ಯೋಗ್ಯ ನಗರವನ್ನಾಗಿ ಪರಿವರ್ತಿಸಲಿದೆ’ ಎಂದು ಬ್ಯಾಂಕಿನ ಉಪಾಧ್ಯಕ್ಷ ಹಾಗೂ ಮುಖ್ಯ ಹೂಡಿಕೆ ಅಧಿಕಾರಿ ಡಿ.ಜೆ.ಪಾಂಡ್ಯನ್‌ ತಿಳಿಸಿದ್ದಾರೆ.

ADVERTISEMENT

‘ಸಾರಿಗೆ ವ್ಯವಸ್ಥೆಯನ್ನು ಮಾಲಿನ್ಯ ಮುಕ್ತಗೊಳಿಸುವ ದಿಸೆಯಲ್ಲಿ ನಮ್ಮ ನೆರವು ಮುಂದುವರಿಯಲಿದೆ. ಭಾರತದಲ್ಲಿ ಇನ್ನಷ್ಟು ಮೆಟ್ರೋ ಯೋಜನೆಗಳಿಗೆ ಹೂಡಿಕೆ ಮಾಡುವ ಬಗ್ಗೆ ಮುಕ್ತ ಮನಸು ಹೊಂದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

2016ರ ಮೇ ತಿಂಗಳಲ್ಲಿ ಆರಂಭವಾದ ಏಷ್ಯನ್‌ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ಚೀನಾದ ಬೀಜಿಂಗ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.

ನಮ್ಮ ಮೆಟ್ರೊ ಎರಡನೇ ಹಂತಕ್ಕೆ ಎಐಐಬಿ ಹಾಗೂ ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಐಬಿ) ಜಂಟಿಯಾಗಿ ಹಣಕಾಸಿನ ನೆರವು ಒದಗಿಸುತ್ತಿವೆ. ಇಐಬಿ ಒಟ್ಟು ₹ 3,700 ಕೋಟಿ ಸಾಲ ನೀಡಲಿದೆ.

‘ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗೆ ಸಾಲ ನೀಡಲು ಎಐಐಬಿ ತಾತ್ವಿಕ ಒಪ್ಪಿಗೆ ನೀಡಿದೆ. ಈ ಬಗ್ಗೆ ಒಪ್ಪಂದಕ್ಕೆ ಇನ್ನಷ್ಟೇ ಸಹಿ ಹಾಕಬೇಕಿದೆ’ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರೀಚ್‌–6 ಮಾರ್ಗದಲ್ಲಿ ಗೊಟ್ಟಿಗೆರೆಯಿಂದ ಸ್ವಾಗತ್‌ ರಸ್ತೆ ತಿರುವು ವರೆಗೆ 7 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ. ಅಲ್ಲಿಂದ ನಾಗವಾರದವರೆಗೆ 13.29 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದೆ.

‘ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಒಟ್ಟು 72 ಕಿ.ಮೀ ಉದ್ದದ ಮಾರ್ಗ ನಿರ್ಮಾಣವಾಗಲಿದ್ದು, ₹ 26 ಸಾವಿರ ಕೋಟಿ ವೆಚ್ಚವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.