ADVERTISEMENT

ಎಐಸಿಸಿ ಅಧ್ಯಕ್ಷೆ ಸೋನಿಯಾ ಒಪ್ಪಿಗೆಗೆ ಪಟ್ಟಿ ರವಾನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 20:12 IST
Last Updated 20 ಸೆಪ್ಟೆಂಬರ್ 2017, 20:12 IST
ಎಐಸಿಸಿ ಅಧ್ಯಕ್ಷೆ ಸೋನಿಯಾ ಒಪ್ಪಿಗೆಗೆ ಪಟ್ಟಿ ರವಾನೆ
ಎಐಸಿಸಿ ಅಧ್ಯಕ್ಷೆ ಸೋನಿಯಾ ಒಪ್ಪಿಗೆಗೆ ಪಟ್ಟಿ ರವಾನೆ   

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ ಜಿಲ್ಲಾ ಘಟಕಗಳಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ ನಿವಾರಿಸಲು 14 ಜಿಲ್ಲೆಗಳ ಅಧ್ಯಕ್ಷರನ್ನು ಬದಲಿಸಿ, ಹೊಸ ಮುಖಗಳಿಗೆ ಮಣೆ ಹಾಕಲು ನಿರ್ಧರಿಸಿದೆ.

ಅಲ್ಲದೆ, ತಳಮಟ್ಟದಲ್ಲಿ ಕಾರ್ಯಕರ್ತರ ಭಿನ್ನಾಭಿಪ್ರಾಯಗಳಿಗೂ ಅಂತ್ಯ ಹಾಡುವ ಉದ್ದೇಶದಿಂದ 100 ಬ್ಲಾಕ್‌ ಮಟ್ಟದ ಅಧ್ಯಕ್ಷರನ್ನೂ ಬದಲಿಸಲು ಪಕ್ಷ ತೀರ್ಮಾನಿಸಿದೆ. ರಾಜ್ಯದಲ್ಲಿ ಒಟ್ಟು 450 ಬ್ಲಾಕ್‌ ಸಮಿತಿಗಳಿವೆ ಎಂದು ಮೂಲಗಳು ತಿಳಿಸಿವೆ.

‘ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಮಟ್ಟದಲ್ಲಿ ಯಾವುದೇ ಕಾರಣಕ್ಕೂ ಅಸಮಾಧಾನ ಕಾಣಿಸಿಕೊಳ್ಳಬಾರದು. ನಾಯಕರ ನಡುವಿನ ಮುನಿಸು ಅಭ್ಯರ್ಥಿ ಆಯ್ಕೆ, ಪ್ರಚಾರ ಮತ್ತು ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಚಿತ. ಅದಕ್ಕೆ ಅವಕಾಶ ಸಿಗದಂತೆ, ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸ್ಥಳೀಯ ನಾಯಕತ್ವ ಬದಲಿಸಲು ಉದ್ದೇಶಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಹೊಸ ಅಧ್ಯಕ್ಷರ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಎಐಸಿಸಿಗೆ ಕಳುಹಿಸಲಾಗುತ್ತಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕಿದ ತಕ್ಷಣ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಹಾಸನ, ಮಂಡ್ಯ, ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಗದಗ, ಹಾವೇರಿ ಜಿಲ್ಲೆಗಳ ಅಧ್ಯಕ್ಷರು ಬದಲಾಗಲಿದ್ದಾರೆ. ವೇಣುಗೋಪಾಲ್‌ ನಡೆಸಿದ ಮೊದಲ ಸಭೆಯಲ್ಲಿ ಕೆಲವು ಜಿಲ್ಲಾ ಘಟಕಗಳಲ್ಲಿನ ನಾಯಕರ ಭಿನ್ನಮತ ಬೀದಿಗೆ ಬಂದಿತ್ತು. ಕೆಪಿಸಿಸಿ ಕಚೇರಿಯ ಮುಂಭಾಗದಲ್ಲೇ ಜಿಲ್ಲಾ ಘಟಕದ ಪದಾಧಿಕಾರಿಗಳ ಮಧ್ಯೆ ವಾಗ್ವಾದವೂ ನಡೆದಿತ್ತು. ಭಿನ್ನಮತ ಶಮನಕ್ಕೆ ಸ್ಥಳೀಯವಾಗಿ ಸಮನ್ವಯ ಸಮಿತಿಯನ್ನೂ ರಚಿಸಲಾಗಿತ್ತು. ಆದರೆ, ಕೆಲವು ಜಿಲ್ಲೆಗಳಲ್ಲಿ ಸಮನ್ವಯ ಸಮಿತಿ ಸಭೆಯೇ ನಡೆದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮಧ್ಯೆ, ಗೊಂದಲಗಳಿರುವ ಹಾಸನ, ಮಂಡ್ಯ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲಾ ಮುಖಂಡರ ಜೊತೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಪ್ರತ್ಯೇಕವಾಗಿ ಮಾತುಕತೆಯ ನಡೆಸಿದ್ದಾರೆ.

ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ನೀತಿ ಪಾಲಿಸಲು ಕೂಡಾ ನಿರ್ಧರಿಸಲಾಗಿದೆ. ಹೀಗಾಗಿ, ಕೆಪಿಸಿಸಿ ಪದಾಧಿಕಾರಿಗಳಾಗಿ ಆಯ್ಕೆ ಆಗಿರುವ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಿಸಲಾಗುವುದು. ಅಲ್ಲದೆ, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಕಳೆದುಕೊಂಡವರನ್ನು ಕೆಪಿಸಿಸಿ ಪದಾಧಿಕಾರಿಗಳಾಗಿ ನೇಮಿಸಲೂ ತೀರ್ಮಾನಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.