ADVERTISEMENT

ಎಟಿಎಂ ಕತ್ತರಿಸಿ ಹಣ ದೋಚಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 20:17 IST
Last Updated 12 ಜೂನ್ 2013, 20:17 IST

ಬೆಂಗಳೂರು:  ನಗರದ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದ ಬಳಿಯ ಕೆನರಾ ಬ್ಯಾಂಕ್ ಎಟಿಎಂ ಘಟಕದಲ್ಲಿನ ಎಟಿಎಂ ಯಂತ್ರವನ್ನು ಕತ್ತರಿಸಿ ರೂ. 19.86 ಲಕ್ಷ ಹಣ ದೋಚಿದ್ದ ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ಬಳಿಯ ಶಾರದಾನಗರದ ರಘು (34), ಹಾಸನದ ಮಹೇಶ (40) ಮತ್ತು ರಾಮನಾಥಪುರದ ಸುನಿಲ್ (32) ಬಂಧಿತರು. ಆರೋಪಿಗಳು ದೋಚಿದ್ದ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

`ಪ್ರಕರಣವನ್ನು ಶೀಘ್ರವೇ ಭೇದಿಸಿ ಉತ್ತಮ ಕೆಲಸ ಮಾಡಿರುವ ಸಿಬ್ಬಂದಿಗೆ 25 ಸಾವಿರ ನಗದು ಬಹುಮಾನ ನೀಡಲಾಗುತ್ತದೆ' ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂಲತಃ ಹಾಸನ ಜಿಲ್ಲೆಯ ರಘು, ಪಿಯುಸಿ ಓದಿದ್ದಾನೆ. ಹಾಸನದ ಖಾಸಗಿ ಡೇರಿಯಲ್ಲಿ ಉದ್ಯೋಗಿಯಾಗಿದ್ದ ಆತ ಆ ಕೆಲಸ ಬಿಟ್ಟು ನಾಲ್ಕು ವರ್ಷಗಳ ಹಿಂದೆ `ಚೆಕ್ ಮೇಟ್' ಸೆಕ್ಯುರಿಟಿ ಏಜೆನ್ಸಿಯ ಇಂದಿರಾನಗರ ಶಾಖೆಯಲ್ಲಿ ಸಹಾಯಕ ಕ್ಷೇತ್ರಾಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದ. ಏಜೆನ್ಸಿಯಲ್ಲಿ ಎಟಿಎಂ ಘಟಕಗಳಿಗೆ ಹಣ ತುಂಬುವ ಕೆಲಸಗಾರರು ರಜೆಯಲ್ಲಿದ್ದಾಗ ಆತನೇ ಆ ಕೆಲಸ ನಿರ್ವಹಿಸುತ್ತಿದ್ದ. ಅದೇ ರೀತಿ ಆತ ಮೇ 25ರಿಂದ 29ರವರೆಗೆ ಇತರೆ ಸಿಬ್ಬಂದಿ ಜತೆ ನಾಗಶೆಟ್ಟಿಹಳ್ಳಿಯ ಕೆನರಾ ಬ್ಯಾಂಕ್ ಎಟಿಎಂ ಘಟಕಕ್ಕೆ ಹೋಗಿ ಹಣ ತುಂಬಿ ಬಂದಿದ್ದ. ಆ ಎಟಿಎಂ ಘಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುವುದಿಲ್ಲ ಎಂಬ ಸಂಗತಿಯನ್ನು ತಿಳಿದ ಆತ, ಇತರೆ ಆರೋಪಿಗಳ ಜತೆ ಸೇರಿ ಹಣ ದೋಚಲು ಸಂಚು ರೂಪಿಸಿದ ಎಂದು ಪೊಲೀಸರು ಹೇಳಿದ್ದಾರೆ.

ಪೂರ್ವಯೋಜಿತ ಸಂಚಿನಂತೆ ಜೂ.8ರಂದು ಸಂಜೆ 6.30ರ ಸುಮಾರಿಗೆ ಎಟಿಎಂ ಘಟಕಕ್ಕೆ ನುಗ್ಗಿದ ಆರೋಪಿಗಳು, ಘಟಕದ ಎರಡೂ ಬಾಗಿಲುಗಳನ್ನು ಸಂಪೂರ್ಣ ಮುಚ್ಚಿ ಕೃತ್ಯ ಎಸಗಿದ್ದರು. ಗ್ಯಾಸ್ ಕಟರ್‌ನ ಸಹಾಯದಿಂದ ಎಟಿಎಂ ಯಂತ್ರವನ್ನು ಕತ್ತರಿಸಿದ ಅವರು ಹಣ ದೋಚಿ ಪರಾರಿಯಾಗಿದ್ದರು.

ಆ ಹಣದಲ್ಲಿ  ರೂ. 1.90 ಲಕ್ಷವನ್ನು ಖರ್ಚು ಮಾಡಿ ಉಳಿದ ಹಣವನ್ನು ರಘುನ ಮನೆಯಲ್ಲಿ ಇಟ್ಟಿದ್ದರು. ಆರೋಪಿಗಳಾದ ಸುನಿಲ್ ಮತ್ತು ಮಹೇಶ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರು ಈ ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ' ಎಂದು ಉತ್ತರ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ'ಗೆ ತಿಳಿಸಿದರು.
ಡಿಸಿಪಿ ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಸಂಜಯನಗರ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣೇಗೌಡ, ಜೆ.ಸಿ.ನಗರ ಇನ್‌ಸ್ಪೆಕ್ಟರ್ ಸಿ.ಗೋಪಾಲ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುಳಿವು ನೀಡಿದ ಮೊಬೈಲ್
`ಪ್ರಕರಣ ಸಂಬಂಧ ಚೆಕ್ ಮೇಟ್ ಸೆಕ್ಯುರಿಟಿ ಏಜೆನ್ಸಿ ಇಂದಿರಾನಗರ ಶಾಖೆಯಲ್ಲಿ ಎಟಿಎಂ ಘಟಕಗಳಿಗೆ ಹಣ ತುಂಬುವ ಕೆಲಸ ನಿರ್ವಹಿಸುವ 12 ಮಂದಿ ಕೆಲಸಗಾರರ ವಿಚಾರಣೆ ನಡೆಸಲಾಯಿತು. ಅಲ್ಲದೇ, ಅವರ ಮೊಬೈಲ್ ಸಂಖ್ಯೆಗಳು ಹಾಗೂ ಕರೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಯಿತು.

ಆ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದಾಗ ಘಟನಾ ಸಂದರ್ಭದಲ್ಲಿ ಆರೋಪಿ ರಘುನ ಮೊಬೈಲ್ ನಾಗಶೆಟ್ಟಿಹಳ್ಳಿ ಸುತ್ತಮುತ್ತಲಿನ ಮೊಬೈಲ್ ಗೋಪುರಗಳ (ಟವರ್) ವ್ಯಾಪ್ತಿಯಲ್ಲಿ ಇದ್ದ ಸಂಗತಿ ಗೊತ್ತಾಯಿತು. ಆ ಸುಳಿವು ಆಧರಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸ್ನೇಹಿತರ ಜತೆ ಸೇರಿಕೊಂಡು ಹಣ ದೋಚಿದ್ದಾಗಿ ಒಪ್ಪಿಕೊಂಡ' ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.