ADVERTISEMENT

ಎಟಿಎಂ ಘಟಕದಲ್ಲಿ ಕಳವು ಯತ್ನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:42 IST
Last Updated 19 ಮಾರ್ಚ್ 2014, 19:42 IST

ಬೆಂಗಳೂರು: ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿನ ಕಾರ್ಪೊರೇಷನ್‌ ಬ್ಯಾಂಕ್‌ ಎಟಿಎಂ ಘಟಕದ ಭದ್ರತಾ ಸಿಬ್ಬಂದಿಗೆ ಚಾಕುವಿನಿಂದ ಇರಿದು ಎಟಿಎಂ ಯಂತ್ರದಿಂದ ಹಣ ದೋಚಲು ಯತ್ನಿಸಿದ್ದ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಮಿಜೋರಾಂ ಮೂಲದ ತಾಂಗಿಯಾ ಸೂಮ್‌ (20) ಮತ್ತು ಹಾವ್‌ಸುಂಗ್‌ ಟಾಂಗ್‌ (19) ಬಂಧಿತರು.

ಸುಮಾರು ಒಂದು ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು ಮೆಜೆಸ್ಟಿಕ್‌ ಬಳಿಯ ಹೋಟೆಲ್‌ ಒಂದ­ರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಆ ಕೆಲಸ ಬಿಟ್ಟಿದ್ದ ಅವರು ಸೋಮವಾರ (ಮಾ.17) ಕೆಲಸ ಹುಡು­ಕಿ­ಕೊಂಡು ಬಿಎಂಟಿಸಿ ಬಸ್‌ನಲ್ಲಿ ಕಮ್ಮನಹಳ್ಳಿಗೆ ಬಂದಿದ್ದರು.
ಸ್ಥಳೀಯ ಬಾರ್‌ನಲ್ಲಿ ರಾತ್ರಿ ಮದ್ಯಪಾನ ಮಾಡಿದ ಅವರು ಕಮ್ಮನಹಳ್ಳಿಯ ಹಲವು ಎಟಿಎಂ ಘಟಕಗಳ ಬಳಿ ಹೋಗಿ ಹಣ ದೋಚುವ ನಿರ್ಧಾರ ಮಾಡಿದ್ದಾರೆ. ಆದರೆ, ಆ ಘಟಕಗಳಲ್ಲಿನ ಭದ್ರತಾ ಸಿಬ್ಬಂದಿ ಎಚ್ಚರ­ವಾಗಿ­­ದ್ದರಿಂದ ಅವರ ಪ್ರಯತ್ನ ಕೈಗೂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ರಾತ್ರಿ 1.15ರ ಸುಮಾರಿಗೆ ಕಾರ್ಪೊರೇಷನ್‌ ಬ್ಯಾಂಕ್‌ ಎಟಿಎಂ ಘಟಕದ ಬಳಿ ಬಂದಾಗ ಭದ್ರತಾ ಸಿಬ್ಬಂದಿ ಮುರುಗನ್‌ ಅವರು ಘಟಕದೊಳಗೆ ಮಲಗಿ­ರು­­ವುದು ಗೊತ್ತಾಗಿದೆ. ಹೀಗಾಗಿ ಆರೋಪಿಗಳು ಘಟಕ­ದೊಳಗೆ ನುಗ್ಗಿ ಹಣ ದೋಚಲು ಮುಂದಾಗಿ­ದ್ದಾರೆ. ಅದೇ ವೇಳೆಗೆ ಎಚ್ಚರಗೊಂಡ ಮುರುಗನ್‌, ಅವ­ರನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ. ಆಗ ಆರೋಪಿ­ಗಳು ಅವರ ಮೇಲೆ ಹಲ್ಲೆ ನಡೆಸಿ, ಹೊಟ್ಟೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇಡೀ ಘಟನಾವಳಿಯ ದೃಶ್ಯ ಘಟಕದೊಳಗಿನ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿಯನ್ನು ಪರಿ­ಶೀ­ಲಿಸಿದಾಗ ಆರೋಪಿಗಳು ಈಶಾನ್ಯ ರಾಜ್ಯಗಳ ವ್ಯಕ್ತಿ­ಗಳೆಂದು ಗೊತ್ತಾಯಿತು. ಬಳಿಕ ಆ ದೃಶ್ಯಾವಳಿ­ಯನ್ನು ‘ವಾಟ್ಸ್‌ಅಪ್‌’ ಮೂಲಕ ಪ್ರಮುಖ ಹೋಟೆ­ಲ್‌­ಗಳು, ಬ್ಯೂಟಿ ಪಾರ್ಲರ್‌­ಗಳು ಮತ್ತು ಈಶಾನ್ಯ ರಾಜ್ಯ­ಗಳ ಯುವಕರನ್ನು ನಗರಕ್ಕೆ ಕರೆತಂದು ಕೆಲಸ ಕೊಡಿ­­ಸುವ ಖಾಸಗಿ ಏಜೆನ್ಸಿಗಳಿಗೆ ಕಳುಹಿಸಿ ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಘಟನಾ ಸಂದರ್ಭ­ದಲ್ಲಿ ಧರಿಸಿದ್ದ ಬಟ್ಟೆಗಳಲ್ಲೇ ಮಂಗಳ­ವಾರ ಸಂಜೆ ಜಯನಗರ ಮೂರನೇ ಬ್ಲಾಕ್‌ನ ಹೋಟೆಲ್‌ ಒಂದಕ್ಕೆ ಹೋಗಿ ಕೆಲಸ ಕೇಳಿದ್ದರು. ಘಟನೆಯ ದೃಶ್ಯಾವಳಿಯನ್ನು ನೋಡಿದ್ದ ಆ ಹೋಟೆಲ್‌ನ ಮುಖ್ಯಸ್ಥರು ಆರೋಪಿಗಳ ಗುರುತು ಹಿಡಿದು ಸಮೀ­ಪದ ಠಾಣೆಗೆ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಹೋಟೆಲ್‌ನ ಬಳಿ ಹೋಗಿ  ಆರೋಪಿಗಳನ್ನು ಬಂಧಿಸಲಾ­ಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.