ADVERTISEMENT

ಎರಡು ಕಲ್ಲುಗಳ ಬೆಲೆ ₹ 2 ಕೋಟಿ!

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 18:42 IST
Last Updated 17 ನವೆಂಬರ್ 2018, 18:42 IST

ಬೆಂಗಳೂರು: ಪುರಾತನ ಕಾಲದ ಹವಳಗಳೆಂದು ₹ 2 ಕೋಟಿಗೆ ಎರಡು ಕಲ್ಲುಗಳನ್ನು ಮಾರಲು ಮುಂದಾಗಿದ್ದ ಆಂಧ್ರಪ್ರದೇಶದ ವಂಚಕರಿಬ್ಬರು ಆರ್‌ಎಂಸಿ ಯಾರ್ಡ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನ.13ರ ರಾತ್ರಿ 8 ಗಂಟೆ ಸುಮಾರಿಗೆ ಆರ್‌ಎಂಸಿ ಯಾರ್ಡ್‌ 4ನೇ ಮುಖ್ಯರಸ್ತೆಯ ‘ಕುಮಾರ ಟ್ರೇಡರ್ಸ್‌’ ಅಂಗಡಿಗೆ ಬಂದಿದ್ದ ರೆಡ್ಡಿ ಶ್ರೀಬಾಗ್ ಹಸ್ತಾರ್ತಿ (37) ಹಾಗೂ ಶ್ಯಾಮಲ್‌ರಾವ್ (40) ಎಂಬುವರು, ‘ನಮ್ಮ ಬಳಿ ಪುರಾತನ ಕಾಲದ ಹವಳಗಳಿವೆ. ವಿದೇಶದಲ್ಲಿ ಇವುಗಳನ್ನು ಮಾರಿದರೆ ₹ 10 ಕೋಟಿ ಸಿಗುತ್ತದೆ. ನಾವು ₹ 2 ಕೋಟಿಗೆ ಮಾರುತ್ತಿದ್ದೇವೆ’ ಎಂದು ಹೇಳಿದ್ದರು.

ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕರು, ಆರೋಪಿಗಳಿಗೆ ತಿಳಿಯದಂತೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು, ಇಬ್ಬರನ್ನೂ ಹಿಡಿದು ಕಲ್ಲುಗಳನ್ನು ಜಪ್ತಿ ಮಾಡಿದ್ದಾರೆ.

ADVERTISEMENT

ಹಸ್ತಾರ್ತಿಯನ್ನು ವಿಚಾರಣೆ ನಡೆಸಿದಾಗ, ‘ಇವು ಕಲ್ಲುಗಳಲ್ಲ. ನಮ್ಮ ತಾತನ ಕಾಲದ ಹವಳಗಳು. ಹಣದ ಅಗತ್ಯ ಇದ್ದುದರಿಂದ ಮಾರಲು ಬಂದಿದ್ದೆವು’ ಎಂದು ಹೇಳಿಕೆ ಕೊಟ್ಟ. ಅದನ್ನು ಸಾಬೀತುಪಡಿಸಲು ಕೆಲ ದಾಖಲೆಗಳನ್ನು ತೋರಿಸಿದ. ಅವೆಲ್ಲವೂ ನಕಲಿ ಆಗಿದ್ದರಿಂದ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.