ADVERTISEMENT

ಎರಡು ಕಾರಿಗೆ ₹38 ಲಕ್ಷ ದಂಡ

ಸಾರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಬೆಂಗಳೂರು: ತೆರಿಗೆ ಪಾವತಿ ಮಾಡದೆ ಸಂಚರಿಸುತ್ತಿದ್ದ ಎರಡು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿರುವ ಅಧಿಕಾರಿಗಳು, ಎರಡೂ ಕಾರಿನ ಮಾಲೀಕರಿಗೆ ₹38 ಲಕ್ಷ ದಂಡ ವಿಧಿಸಿದ್ದಾರೆ.

ಮೋಟಾರು ವಾಹನಗಳ ಹಿರಿಯ ನಿರೀಕ್ಷಕ ರಾಜಣ್ಣ ನೇತೃತ್ವದ ತಂಡವು ಸದಾಶಿವನಗರ ಪೊಲೀಸ್‌ ಠಾಣೆ ಬಳಿ ಇತ್ತೀಚೆಗೆ  ವಾಹನಗಳ ತಪಾಸಣೆ ನಡೆಸಿತ್ತು. ಅದೇ ವೇಳೆ, ಈ ಐಷಾರಾಮಿ ಕಾರುಗಳು ಪತ್ತೆಯಾಗಿದ್ದವು.

ಮಹಿಳೆಯೊಬ್ಬರ ಹೆಸರಿಗೆ ತಾತ್ಕಾಲಿಕವಾಗಿ ನೋಂದಣಿ ಆಗಿದ್ದ ಮರ್ಸಿಡೀಸ್ ಬೆನ್ಜ್‌ ಕಾರು (ಕೆಎ 05 ಟಿಎಫ್‌ 4555), ಶಾಶ್ವತ ನೋಂದಣಿ ಸಂಖ್ಯೆ ಪಡೆದಿರಲಿಲ್ಲ. ಮಾಲೀಕರು ಈ ಕಾರನ್ನು ಸಿದ್ಧಿಕಿ ಎಂಬುವರಿಗೆ ನೀಡಿದ್ದರು. ಅವರೇ ಕಾರನ್ನು ಬಳಸುತ್ತಿದ್ದರು ಎಂದು ಯಶವಂತಪುರ ಆರ್‌ಟಿಒ ಬಾಲಕೃಷ್ಣ ತಿಳಿಸಿದರು.

ADVERTISEMENT

ದಾಖಲೆಗಳನ್ನು ಪರಿಶೀಲಿಸಿದ ನಂತರ, ₹20 ಲಕ್ಷ ತೆರಿಗೆ ಕಟ್ಟದಿರುವುದು ಗೊತ್ತಾಯಿತು. ನಂತರ, ಕಾರು ಜಪ್ತಿ ಮಾಡಿದೆವು. ಹಣ ಪಾವತಿಸಿ ಕಾರನ್ನು ಬಿಡಿಸಿಕೊಂಡು ಹೋಗುವಂತೆ ನೋಟಿಸ್‌ ನೀಡಿದ್ದೇವೆ ಎಂದರು.

ಇನ್ನೊಂದು ಪ್ರಕರಣದಲ್ಲಿ, ಅಂಥದ್ದೇ ಮರ್ಸಿಡೀಸ್ ಬೆನ್ಜ್‌ ಕಾರು (ಪಿವೈ 01 ಬಿಎಚ್‌ 8222) ಜಪ್ತಿ ಮಾಡಲಾಗಿದೆ. ಪುದುಚೇರಿಯಲ್ಲಿ ನೋಂದಣಿ ಮಾಡಿಸಿರುವ ಈ ಕಾರು, 2015ರ ಜುಲೈನಿಂದ ರಾಜ್ಯದಲ್ಲಿ ಓಡಾಡುತ್ತಿದೆ. ಆ ಕಾರು ತಪಾಸಣೆ ನಡೆಸಿ, ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದೆವು. ಕಾರಿನ ಮಾಲೀಕರು ಇಲಾಖೆಗೆ ವಂಚಿಸಿದ್ದು ಗೊತ್ತಾಯಿತು ಎಂದರು.

ಈ ಕಾರನ್ನು ಕಂಪನಿಯೊಂದರ ಮುಖ್ಯಸ್ಥರು ಬಳಕೆ ಮಾಡುತ್ತಿದ್ದಾರೆ. ಅವರಿಗೆ ನೋಟಿಸ್‌ ನೀಡಿದ್ದು, ₹18 ಲಕ್ಷ ದಂಡ ಪಾವತಿ ಮಾಡುವಂತೆ ಹೇಳಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.