ADVERTISEMENT

ಎರಡೂ ಕಡೆಗಳಿಂದಲೂ ಶುಲ್ಕ ವಸೂಲಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:39 IST
Last Updated 26 ಮಾರ್ಚ್ 2018, 19:39 IST
ಎರಡೂ ಕಡೆಗಳಿಂದಲೂ ಶುಲ್ಕ ವಸೂಲಿ
ಎರಡೂ ಕಡೆಗಳಿಂದಲೂ ಶುಲ್ಕ ವಸೂಲಿ   

ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಪರ್ಯಾಯ ರಸ್ತೆ ನಿರ್ಮಿಸಿದ ಬಳಿಕ ಶುಲ್ಕ ಸಂಗ್ರಹದಲ್ಲಿ ನಷ್ಟವಾಗುತ್ತಿದೆ ಎಂಬ ಕಾರಣ ನೀಡಿ ನವಯುಗ ಸಂಸ್ಥೆಯು ಬಳ್ಳಾರಿ ರಸ್ತೆಯಲ್ಲಿ ಎರಡೂ ಕಡೆಯಿಂದಲೂ (ಟು–ವೇ) ಶುಲ್ಕ ವಸೂಲಿ ಮಾಡಲು ಮುಂದಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಇದು ಜಾರಿಯಾಗಲಿದೆ.

ಬಳ್ಳಾರಿ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವಾಹನಗಳಿಗೆ ಇಷ್ಟು ದಿನ ಉಚಿತ ಪ್ರವೇಶವಿತ್ತು. ಅಲ್ಲಿಂದ ವಾಪಸ್‌ ಬರುವಾಗ ಈ ವಾಹನಗಳಿಂದ ₹125 ಟೋಲ್‌ ವಸೂಲಿ ಮಾಡಲಾಗುತ್ತಿತ್ತು. ಈಗ ಚಾಲಕರು ವಿಮಾನ ನಿಲ್ದಾಣದ ಕಡೆಗೆ ಹೋಗುವಾಗಲೂ ಶುಲ್ಕ ಪಾವತಿಸಬೇಕಿದೆ.

ರಾಷ್ಟ್ರೀಯ ಹೆದ್ದಾರಿ–7ಕ್ಕೆ (ಬಳ್ಳಾರಿ ರಸ್ತೆ) ಪರ್ಯಾಯವಾಗಿ ನಾಗವಾರ– ಬಾಗಲೂರು ಕಡೆಯಿಂದ ನಿರ್ಮಿಸಿರುವ ರಸ್ತೆಯನ್ನು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು.

ADVERTISEMENT

‘ನಗರದಿಂದ ಬಳ್ಳಾರಿ ರಸ್ತೆ ಮೂಲಕ ವಿಮಾನನಿಲ್ದಾಣದತ್ತ ಹೋಗುವ ವಾಹನಗಳು ಅಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಪರ್ಯಾಯ ರಸ್ತೆ ಮೂಲಕ ವಾಪಸ್ಸಾಗುತ್ತಿವೆ. ಅವುಗಳಿಂದ ಶುಲ್ಕ ಸಂಗ್ರಹವಾಗುತ್ತಿಲ್ಲ. ನಮಗಾಗುತ್ತಿರುವ ನಷ್ಟ ಸರಿದೂಗಿಸಲು ಎರಡೂ ಕಡೆಯಿಂದಲೂ ಶುಲ್ಕ ವಸೂಲಿ ಮಾಡಲು ತೀರ್ಮಾನಿಸಿದ್ದೇವೆ’ ಎಂದು ನವಯುಗ ದೇವನಹಳ್ಳಿ ಟೋಲ್‌ ಪ್ಲಾಜಾದ (ಎನ್‌ಡಿಟಿಪಿಎಲ್‌) ಸಹಾಯಕ ವ್ಯವಸ್ಥಾಪಕ ಅಮರನಾಥ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರ್ಯಾಯ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ ಬಳಿಕ ಅದರಲ್ಲಿ ನಿತ್ಯ 15 ಸಾವಿರ ವಾಹನಗಳು ಸಂಚರಿಸುತ್ತಿವೆ. ಬಳ್ಳಾರಿ ರಸ್ತೆಯ ಟೋಲ್‌ ಪ್ಲಾಜಾಗಳ ಮೂಲಕ ಸಾಗುವ ವಾಹನಗಳ ಸಂಖ್ಯೆ 13 ಸಾವಿರದಷ್ಟು ಕಡಿಮೆ ಆಗಿದೆ. ಈ ಹಿಂದೆ ನಿತ್ಯವೂ ₹30 ಲಕ್ಷದಷ್ಟು ಶುಲ್ಕ ಸಂಗ್ರಹವಾಗುತ್ತಿತ್ತು. ಈಗ ಅದರಲ್ಲಿ ಶೇ 55ರಷ್ಟು ಕಡಿಮೆ ಆಗಿದೆ. ಇದರಿಂದಾಗಿ, ನಮಗೆ ದಿನವೊಂದಕ್ಕೆ ₹16 ಲಕ್ಷದಷ್ಟು ನಷ್ಟವಾಗುತ್ತಿದೆ’ ಎಂದು ಅವರು ವಿವರಿಸಿದರು.

ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ‘ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಟ್ಯಾಕ್ಸಿಯಲ್ಲಿ ಪ್ರಯಾಣಿಕರು ಇರುತ್ತಾರೆ. ಆಗ ಶುಲ್ಕ ಪಾವತಿಸಿದರೆ ನಮಗೆ ಹೊರೆಯಾಗುವುದಿಲ್ಲ. ಆದರೆ, ಪ್ರಯಾಣಿಕರನ್ನು ನಗರದಲ್ಲಿ ಇಳಿಸಿ ವಿಮಾನ ನಿಲ್ದಾಣಕ್ಕೆ ಹೋಗುವ ಖಾಲಿ ಟ್ಯಾಕ್ಸಿಗಳಿಂದಲೂ ಶುಲ್ಕ ಪಡೆಯುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಓಲಾ, ಉಬರ್‌ ಕ್ಯಾಬ್‌ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ, ‘ಎರಡು ಕಡೆಯೂ ಶುಲ್ಕ ವಸೂಲಿ ಮಾಡುವುದನ್ನು ಖಂಡಿಸಿ ಟೋಲ್‌ಗೇಟ್‌ ಎದುರು ಪ್ರತಿಭಟನೆ ನಡೆಸಲಿದ್ದೇವೆ’ ಎಂದರು.

‘ನಗರದಿಂದ ವಿಮಾನನಿಲ್ದಾಣಕ್ಕೆ 26.5 ಕಿ.ಮೀ ರಸ್ತೆ ಇದೆ. ಕಡಿಮೆ ದೂರದ ರಸ್ತೆಗೆ ಅಗತ್ಯಕ್ಕಿಂತ ಹೆಚ್ಚು ಟೋಲ್‌ ಕಟ್ಟುತ್ತಿದ್ದೇವೆ. ಇಂಥ ಟೋಲ್‌ ದೇಶದಲ್ಲಿ ಎಲ್ಲಿಯೂ ಇಲ್ಲ. ಟೋಲ್‌ನ್ನು ಪ್ರಯಾಣಿಕರಿಂದ ವಸೂಲಿ ಮಾಡಬೇಕು ಎಂದು ಸಾರಿಗೆ ಇಲಾಖೆ ಹೇಳಿದೆ. ಇನ್ನು ಮುಂದೆ ಪ್ರಯಾಣಿಕರು ಹಾಗೂ ಚಾಲಕರು ಜಗಳ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ’ ಎಂದರು.

‘ಬಳ್ಳಾರಿ ರಸ್ತೆಯು ಅಸುರಕ್ಷಿತವಾಗಿದೆ. ಹೆದ್ದಾರಿ ಆಸುಪಾಸಿನಲ್ಲಿ ಎಲ್ಲೂ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿಲ್ಲ. ಅಗತ್ಯವಿರುವ ಕಡೆ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ. ಆ ಬಗ್ಗೆ ಕ್ರಮ ಕೈಗೊಳ್ಳದ ಟೋಲ್‌ನವರು, ಶುಲ್ಕ ವಸೂಲಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳೂ ಶುಲ್ಕ ಪಾವತಿಸಲು ಗೇಟ್‌ ಬಳಿ ಹಲವಾರು ನಿಮಿಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಟೋಲ್‌ ಗೇಟ್‌ಗಳ ಬಳಿ ವಾಹನ ದಟ್ಟಣೆ ಉಂಟಾಗುವ ಅಪಾಯವಿದೆ. ಇದರಿಂದಾಗಿ ಪ್ರಯಾಣಿಕರಿಗೆ ವಿಮಾನ ತಪ್ಪುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು’ ಎಂದು ಅವರು ದೂರಿದರು.

‘ಸಾಕಷ್ಟು ಸಂಖ್ಯೆಯಲ್ಲಿ ಹೊಸ ಬೂತ್‌ಗಳನ್ನು ಎನ್‌ಡಿಟಿಪಿಎಲ್‌ ಸ್ಥಾಪಿಸಿದೆ. ಹಾಗಾಗಿ ಟೋಲ್‌ ಗೇಟ್‌ಗಳ ಬಳಿ ವಾಹನ ದಟ್ಟಣೆ ಉಂಟಾಗದು’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಆರ್‌.ಕೆ.ಸೂರ್ಯವಂಶಿ ತಿಳಿಸಿದರು.

15ಕೋಟಿ ದಾಟಿದ ಪ್ರಯಾಣಿಕರ ಸಂಖ್ಯೆ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶ ಹಾಗೂ ಹೊರ ರಾಜ್ಯಗಳಿಗೆ ಪ್ರಯಾಣಿಸಿದವರ ಸಂಖ್ಯೆಯು 15 ಕೋಟಿ ಗಡಿ ದಾಟಿದೆ.

2008ರ ಮೇನಲ್ಲಿ ಆರಂಭವಾದ ನಿಲ್ದಾಣದಲ್ಲಿ ಪ್ರತಿವರ್ಷವೂ ಶೇ 19ರಷ್ಟು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. 2012ರ ಡಿಸೆಂಬರ್ 19ರ ವೇಳೆಗೆ 5 ಕೋಟಿ ಪ್ರಯಾಣಿಕರು ನಿಲ್ದಾಣದ ಮೂಲಕ ಪ್ರಯಾಣಿಸಿದ್ದರು. 2015ರಲ್ಲಿ ಅವರ ಸಂಖ್ಯೆ 10 ಕೋಟಿಷ್ಟಿತ್ತು ಎಂದು ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್‌ ತಿಳಿಸಿದ್ದಾರೆ.

ಪ್ರತಿ ಗಂಟೆಗೆ 38 ವಿಮಾನಗಳು ಹಾರಾಟ ನಡೆಸಬಲ್ಲ ಸಾಮರ್ಥ್ಯ ಸದ್ಯದ ರನ್‌ವೇಗೆ ಇದೆ. ನಿತ್ಯವೂ ಸದ್ಯ 666 ವಿಮಾನಗಳು (591 ಸ್ಥಳೀಯ ಹಾಗೂ 75 ಅಂತರ
ರಾಷ್ಟ್ರೀಯ) ನಿಲ್ದಾಣದಿಂದ ಸಂಚರಿಸುತ್ತಿವೆ. ಈ ವರ್ಷದ ಅಂತ್ಯದಲ್ಲಿ ಅವುಗಳ ಸಂಖ್ಯೆಯು 687ರಷ್ಟಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಹೊಸ ಮಾರ್ಗಗಳು: ನಗರದ ನಿಲ್ದಾಣದಿಂದ ಬಹ್ರೇನ್‌ಗೆ ಸದ್ಯ ಒಂದೇ ವಿಮಾನ ಸಂಚರಿಸುತ್ತಿದೆ. ಕೆಲವೇ ದಿನಗಳಲ್ಲಿ ಇನ್ನೆರಡು ವಿಮಾನಗಳು ಈ ಮಾರ್ಗದಲ್ಲಿ ಹಾರಾಡಲಿವೆ. ವಡೋದರಾ ಹಾಗೂ ಜಮ್ಮುಗೆ ಆಗಸ್ಟ್‌ 1ರಿಂದ ಹೊಸದಾಗಿ ವಿಮಾನಗಳು ಸಂಚಾರ ಆರಂಭಿಸಲಿವೆ ಎಂದು ಮರಾರ್‌ ತಿಳಿಸಿದ್ದಾರೆ.

15 ಹೊಸ ಬೂತ್‌ ನಿರ್ಮಾಣ

ಶುಲ್ಕ ವಸೂಲಿಗಾಗಿ ಟೋಲ್‌ಗೇಟ್‌ನಲ್ಲಿ ಹೊಸದಾಗಿ 15 ಬೂತ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಕೆಲಸ ಮಾಡಲು ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಅದರಲ್ಲೇ ಒಂದು ಬೂತ್‌ನಲ್ಲಿ ಆಂಬುಲೆನ್ಸ್ ಹಾಗೂ ಗಣ್ಯ ವ್ಯಕ್ತಿಗಳ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

‘ಎರಡೂ ಕಡೆಯಿಂದಲೂ ಶುಲ್ಕ ವಸೂಲಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ನಮ್ಮ ಭದ್ರತಾ ಸಿಬ್ಬಂದಿ ಜತೆಗೆ ಪೊಲೀಸರ ಸಹಾಯವನ್ನು ಪಡೆದು ಶುಲ್ಕ ಸಂಗ್ರಹ ಆರಂಭಿಸಿದ್ದೇವೆ’ ಎಂದು ‘ನವಯುಗ ಟೋಲ್‌ಗೇಟ್‌’ ಅಧಿಕಾರಿಯೊಬ್ಬರು ತಿಳಿಸಿದರು.

ಶುಲ್ಕ ಪರಿಷ್ಕರಣೆ
ಚಾಲ್ತಿಯಲ್ಲಿರುವ ಟೋಲ್‌ ದರವನ್ನು ಮಾರ್ಚ್‌ 31ರ ನಂತರ ಪರಿಷ್ಕರಿಸಲು ಅವಕಾಶವಿದೆ. ಏಪ್ರಿಲ್‌ 1ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.

‘ನಿಯಮಾನುಸಾರ  ವರ್ಷಕ್ಕೆ ₹ 5ರಷ್ಟು ಶುಲ್ಕ ಪರಿಷ್ಕರಣೆಗೆ ಅವಕಾಶ ಇದೆ’ ಎಂದು ಆರ್‌.ಕೆ.ಸೂರ್ಯವಂಶಿ ತಿಳಿಸಿದರು.

ಶುಲ್ಕ ಹೆಚ್ಚಳ ಮಾಡಿದರೆ ತುರ್ತು ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಆಲ್‌ ಇಂಡಿಯಾ ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ಷಣ್ಮುಗಪ್ಪ ತಿಳಿಸಿದರು.

**

ಟೋಲ್‌ ದರಪಟ್ಟಿ (₹ಗಳಲ್ಲಿ)

ವಾಹನಗಳ ಮಾದರಿ, ಪ್ರತಿ ಟ್ರಿಪ್, ಎರಡೂ ಕಡೆ, ತಿಂಗಳ ಪಾಸ್‌

ಕಾರು/ಜೀಪು/ವ್ಯಾನ್, 85, 125, 2,780

ಲಘು ವಾಹನ, 130, 190, 4,270

ಬಸ್‌/ಟ್ರಕ್‌, 260, 385, 8,585

3ರಿಂದ 6 ಆ್ಯಕ್ಸಲ್, 390, 585, 13,030

7ಕ್ಕಿಂತ ಹೆಚ್ಚು ಆ್ಯಕ್ಸಲ್, 510, 765, 16,970

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.