ADVERTISEMENT

ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST
ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ
ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ   

ಬೆಂಗಳೂರು: ನಗರದ ಸಾರ್ವಜನಿಕ ಆರೋಗ್ಯ ಸಂಸ್ಥೆ (ಐಪಿಎಚ್), ಬೆಲ್ಜಿಯಂ ದೇಶದ ಅಂಟ್ವೆರ್ಪ್‌ನ ಸಂಚಾರ ವೈದ್ಯಕೀಯ ಸಂಸ್ಥೆಗಳು, ಕರ್ನಾಟಕ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರ ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ಆರೋಗ್ಯ ರಕ್ಷಣೆ ಕುರಿತ ಎರಡನೇ ರಾಷ್ಟ್ರೀಯ ಸಮಾವೇಶಕ್ಕೆ ನಗರದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ `ಬಡವರು ಹಾಗೂ ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟ ಎದುರಿಸುತ್ತಿರುವವರು ಸೇರಿದಂತೆ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಬದ್ಧ~ ಎಂದು ಭರವಸೆ ನೀಡಿದರು.

ಸ್ವಯಂಸೇವಾ ಸಂಘಟನೆ `ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್~ ಹೊರತಂದಿರುವ `ಸಮಗ್ರ ಆರೋಗ್ಯ ಸೇವೆ - ಭಾರತದ ಹಲವು ರಾಜ್ಯಗಳ ಕಾರ್ಯಾಚರಣೆ ವಿಧಾನ~ ಕುರಿತ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು.
 `ಎಲ್ಲರಿಗೂ ಆರೋಗ್ಯ ರಕ್ಷಣೆ ನೀಡಲು ಆರೋಗ್ಯ ಸೇವೆಗಳ ಬಲವರ್ಧನೆ~ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಸಮಾವೇಶದಲ್ಲಿ ದೇಶದ 300ಕ್ಕೂ ಅಧಿಕ ಸಂಶೋಧಕರು, ತಜ್ಞ ವೈದ್ಯರು, ನೀತಿ ನಿರೂಪಕರು ತಮ್ಮ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುವರು.

ಸಮಾವೇಶದಲ್ಲಿ ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲ, ಆರೋಗ್ಯ ರಕ್ಷಣೆ, ಹಣಕಾಸು, ಆರೋಗ್ಯ ಸೇವೆಗಳ ವಿತರಣೆ, ಆಡಳಿತ ಮತ್ತು ನಿಯಂತ್ರಣ ಸೇರಿದಂತೆ ಹಲವು ಆಯಾಮಗಳ ಬಗ್ಗೆ ಚರ್ಚಿಸಲಾಗುವುದು. 11 ರಾಜ್ಯಗಳ 50ಕ್ಕೂ ಅಧಿಕ ಸಂಶೋಧಕರು ಪ್ರಬಂಧ ಮಂಡಿಸುವರು.

ಐಪಿಎಚ್ ನಿರ್ದೇಶಕ ಡಾ. ದೇವದಾಸನ್, ರಾಷ್ಟ್ರೀಯ ಆರೋಗ್ಯ ಸೇವೆಗಳ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ. ಟಿ. ಸುಂದರರಾಮನ್, ಅಂಟ್ವೆರ್ಪ್‌ನ ಸಂಚಾರ ವೈದ್ಯಕೀಯ ಸಂಸ್ಥೆಯ ಪ್ರೊ. ಬ್ರೂನೋ ಗ್ರೈಸೀಲ್ಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್, ರಾಜ್ಯ ಆರೋಗ್ಯ ಸೇವೆಗಳ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ. ಮೋಹನರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.