ADVERTISEMENT

ಎಲ್‌ಪಿಜಿ ದರ ಹೆಚ್ಚಳ: 6ರಂದು ಆಟೊ ಮುಷ್ಕರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 20:07 IST
Last Updated 1 ಜನವರಿ 2014, 20:07 IST

ಬೆಂಗಳೂರು: ಆಟೊ ಎಲ್‌ಪಿಜಿ ದರ ಹೆಚ್ಚಳ ಕ್ರಮ ವಿರೋಧಿಸಿ ನಗರ ದಲ್ಲಿ ಸೋಮವಾರ (ಜ.6) ಆಟೊ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಆಟೊ ಚಾಲಕರು ನಿರ್ಧರಿಸಿದ್ದಾರೆ.

‘ಕೇಂದ್ರ ಸರ್ಕಾರ ತೈಲ ಕಂಪೆನಿಗಳ ಹಿತರಕ್ಷಣೆಗಾಗಿ ಆಟೊ ಎಲ್‌ಪಿಜಿ ದರವನ್ನು ಏಕಾಏಕಿ ಹೆಚ್ಚಳ ಮಾಡಿದೆ. ಈ ಕ್ರಮ ಖಂಡಿಸಿ ನಗರದೆಲ್ಲೆಡೆ ಸೋಮವಾರ ಆಟೊ ಸೇವೆ ಸ್ಥಗಿತ ಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸ­ಲಾಗಿದೆ’ ಎಂದು (ಸಿಐಟಿಯು) ನಗರ ಆಟೊ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಆಟೊ ಪ್ರಯಾಣ ದರ ಹೆಚ್ಚಿಸಿದ್ದೇವೆ. ಆದ್ದರಿಂದ ಎಲ್‌ಪಿಜಿ ದರ ಏರಿಕೆಗೆ ಅನುಗುಣ ವಾಗಿ ಪ್ರಯಾಣ ದರವನ್ನು ಪುನಃ ಹೆಚ್ಚಿಸಿದರೆ ಪ್ರಯಾಣಿಕರಿಗೆ ತೊಂದರೆ ಯಾಗುತ್ತದೆ. ಪ್ರಯಾಣ ದರ ಹೆಚ್ಚಿಸ ದಿದ್ದರೆ ಚಾಲಕರಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ ಎಂದಿದ್ದಾರೆ.

ತೈಲ ಕಂಪೆನಿಗಳಿಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ, ಜನಸಾಮಾನ್ಯರು ಮತ್ತು ಚಾಲಕರನ್ನು ಆರ್ಥಿಕ ಸಂಕಷ್ಟಕ್ಕೆ ಈಡು ಮಾಡಿದೆ. ಸಾರ್ವಜನಿಕರ ದುಡಿಮೆ ಹಣವನ್ನೆಲ್ಲಾ ತೈಲ ಕಂಪೆನಿಗಳಿಗೆ ಒತ್ತೆ ಇಡುತ್ತಿದೆ ಎಂದು ದೂರಿದ್ದಾರೆ.

‘ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಈ ಸ್ಥಿತಿಯಲ್ಲಿ ಸರ್ಕಾರ ಪದೇ ಪದೇ ಆಟೊ ಎಲ್‌ಪಿಜಿ ದರ ಹೆಚ್ಚಿಸುತ್ತಿರುವುದ ರಿಂದ ಆಟೊ ಪ್ರಯಾಣ ದರದಲ್ಲೂ ಏರಿಕೆಯಾಗಿ ಮತ್ತಷ್ಟು ತೊಂದರೆ ಯಾಗುತ್ತದೆ’ ಎಂದು ಪ್ರಯಾಣಿಕ ರಾದ ತಾರಾ ಅಳಲು ತೋಡಿ ಕೊಂಡಿದ್ದಾರೆ.

ಪ್ರತಿಭಟನೆ: ‘ದರ ಹೆಚ್ಚಳ ವಾಪಸ್‌ ಪಡೆಯಬೇಕು. ತೈಲೋತ್ಪನ್ನಗಳ ಮೇಲಿನ ಸ್ಥಳೀಯ ಮತ್ತು ಮಾರಾಟ ತೆರಿಗೆ ಪ್ರಮಾಣ ಕಡಿಮೆ ಮಾಡ ಬೇಕು’ ಎಂದು ಒತ್ತಾಯಿಸಿ ವಿವಿಧ ಆಟೊ ಚಾಲಕರ ಸಂಘಟನೆಗಳ ಸದಸ್ಯರು ಪುರಭವನದ ಬಳಿ ಬುಧ ವಾರ ಪ್ರತಿಭಟನೆ ಮಾಡಿದರು.

ದರ ಹೆಚ್ಚಳ: ನಗರದಲ್ಲಿ ಮಂಗಳವಾರ (ಜ.1) ಮಧ್ಯರಾತ್ರಿ­ಯಿಂದಲೇ ಜಾರಿಗೆ ಬರುವಂತೆ ಆಟೊ ಎಲ್‌ಪಿಜಿ ದರ­ದಲ್ಲಿ ಲೀಟರ್‌ಗೆ ₨ 11.13 ಹೆಚ್ಚಳವಾಗಿದೆ. ನಗರದ ಪೆಟ್ರೋಲ್ ಬಂಕ್‌­ಗಳಲ್ಲಿ ಈ ಹಿಂದೆ ಆಟೊ ಎಲ್‌ಪಿಜಿ ದರ ಲೀಟರ್‌ಗೆ ₨ 54.40 ಇತ್ತು. ಇದೀಗ ಪರಿಷ್ಕೃತ ದರ ₨ 65.53 ಆಗಿದೆ. 2013ರ ಡಿ.20ರಿಂದ ಅನ್ವಯವಾಗುವಂತೆ 1.9 ಕಿ.ಮೀ ಆಟೊ ಕನಿಷ್ಠ ಪ್ರಯಾಣ ದೂರದ ದರವನ್ನು ₨ 20ರಿಂದ 25ಕ್ಕೆ ಹೆಚ್ಚಿಸಲಾಗಿತ್ತು. ನಗರದಲ್ಲಿ ಸುಮಾರು 1.20 ಲಕ್ಷ ಆಟೊಗಳಿದ್ದು, ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.