ADVERTISEMENT

ಎಸ್‌ಟಿಪಿ ನಿರ್ಮಾಣಕ್ಕೆ ಸಿಗುತ್ತಿಲ್ಲ ಸ್ಥಳ

​ಪ್ರಜಾವಾಣಿ ವಾರ್ತೆ
Published 10 ಮೇ 2018, 20:02 IST
Last Updated 10 ಮೇ 2018, 20:02 IST
ಇವುಗಳನ್ನು ತೋರಿಸಿ ಜಲಮಂಡಳಿಯ ಪೈಪ್‌ಗಳೆಂದು ಸುಳ್ಳು ಹಬ್ಬಿಸಲಾಗುತ್ತಿದೆ
ಇವುಗಳನ್ನು ತೋರಿಸಿ ಜಲಮಂಡಳಿಯ ಪೈಪ್‌ಗಳೆಂದು ಸುಳ್ಳು ಹಬ್ಬಿಸಲಾಗುತ್ತಿದೆ   

ಬೆಂಗಳೂರು: ಹೆಸರಘಟ್ಟ ಕೆರೆಗೆ ಒಳಚರಂಡಿ ನೀರು ನೇರವಾಗಿ ಹರಿಯುವುದನ್ನು ತಪ್ಪಿಸಲು ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪಿಸಲು ಜಲಮಂಡಳಿ ಮುಂದಾಗಿದ್ದು, ಅದಕ್ಕೆ ಜಾಗ ದೊರೆಯದೆ ಕಾಮಗಾರಿ ವಿಳಂಬವಾಗುತ್ತಿದೆ.

ಎಸ್‌ಟಿಪಿ ನಿರ್ಮಿಸಲು ಏಳು ತಿಂಗಳ ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಅದಕ್ಕೆ ಸೂಕ್ತ ಜಾಗ ಸಿಗದೆ ಇತರೆ ಕಾಮಗಾರಿಗಳು ನಿಧಾನವಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಒಳಚರಂಡಿಗೆ ಪ್ರತ್ಯೇಕ ಕೊಳವೆ ಮಾರ್ಗ ನಿರ್ಮಿಸಲು ಜನವರಿಯಲ್ಲಿ ಸರ್ವೆ ಕೆಲಸ ಪ್ರಾರಂಭಿಸಲಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಮುಂದಿನ ಹಂತದಲ್ಲಿ ಪೈಪ್‌ಲೈನ್‌ ಅಳವಡಿಸುವ ಕೆಲಸ ಮಾಡಬೇಕು. ಆದರೆ, ಎಸ್‌ಟಿಪಿ ನಿರ್ಮಿಸದೆ ಅದು ಸಾಧ್ಯವಿಲ್ಲ ಎನ್ನುತ್ತಾರೆ ಬಿಳಿಜಾಜಿ ಗ್ರಾಮದ ಗೋವಿಂದರಾಜು.

ADVERTISEMENT

‘ಒಳಚರಂಡಿ ನೀರನ್ನು ಸಂಸ್ಕರಿಸದೆ ಕೆರೆಯ ನೀರು ಕಲುಷಿತವಾಗಿದೆ. ಆ ನೀರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುತ್ತಿದೆ. ಹೀಗಾಗಿ ಜಲಾಶಯದ ನೀರನ್ನು ಬಳಸಲು ಆಗುತ್ತಿಲ್ಲ. ಉತ್ತಮವಾಗಿ ಮಳೆಯಾಗುತ್ತಿದ್ದು, ಶೀಘ್ರ ಎಸ್‌ಟಿಪಿ ನಿರ್ಮಾಣವಾದರೆ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಯ್ಯ, ‘ಒಳಚರಂಡಿ ಮಾರ್ಗ ಅಗುವ ಬಗ್ಗೆ ಎಲ್ಲರಿಗೂ ಸಂತಸವಿದೆ. ಆದರೆ, ಜಲಮಂಡಳಿ ಸರ್ವೆ ಕೆಲಸವನ್ನೇ ಇನ್ನೂ ಪೂರ್ಣಗೊಳಿಸಿಲ್ಲ. ಅದರ ಸಾಧಕ ಬಾಧಕಗಳ ಸಭೆಯನ್ನು ಕರೆದಿಲ್ಲ’ ಎಂದರು.

ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಜಯಲಕ್ಷಿ, ‘‌‌ಎಸ್‌ಟಿಪಿ ನಿರ್ಮಿಸಲು ಕೊಡಗಿ ತಿರುಮಲಾಪುರ ಗ್ರಾಮದಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಅದು ಖಾಸಗಿ ಜಾಗವಾಗಿದ್ದು, ಅದನ್ನು ಕೊಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆ ಬಗ್ಗೆ ಉತ್ತರ ಬಂದ ಮೇಲೆ ಟೆಂಡರ್ ಕರೆಯುತ್ತೇವೆ’ ಎಂದು ಹೇಳಿದರು.

ಎಸ್‌ಟಿಪಿ ನಿರ್ಮಾಣಕ್ಕೆ ಸಿಗುತ್ತಿಲ್ಲ ಸ್ಥಳ
‘ಎಸ್‌ಟಿಪಿ ನಿರ್ಮಾಣವಾಗದೆ ಪೈಪ್‌ಲೈನ್‌ ಅಳವಡಿಸಲಾಗುವುದು ಎಂದು ಕೆಲವರು ಸುಳ್ಳುಸುದ್ದಿ ಹಬ್ಬಿಸುತ್ತಿದ್ದು, ಅದು ಸತ್ಯಕ್ಕೆ ದೂರವಾದ್ದದ್ದು’ ಎಂದು ಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ.

ಗ್ರಾಮದಲ್ಲಿ ಕೆಲವರು ಪೈಪ್‌ಗಳನ್ನು ತಂದಿಟ್ಟುಕೊಂಡಿದ್ದಾರೆ. ಅವು ಮಂಡಳಿ ಪೈಪ್‌ಗಳಲ್ಲ. ಟೆಂಡರ್‌ ಆಗದೆ ಖರೀದಿಸಲು ಸಾಧ್ಯವಿಲ್ಲ. ಸದ್ಯ ಮಾರ್ಗದ ಸರ್ವೆ ಕೆಲಸ ನಡೆಯುತ್ತಿದೆ. ಇದು ಎರಡು ವರ್ಷಗಳ ಯೋಜನೆಯಾಗಿದೆ ಎಂದು ಹೇಳಿದರು.

ಅಂಕಿ ಅಂಶ
₹23 ಕೋಟಿ -ಒಳಚರಂಡಿ ಮಾರ್ಗ ನಿರ್ಮಾಣ ವೆಚ್ಚ
₹7.25 ಕೋಟಿ- ಎಸ್‌ಟಿಪಿ ನಿರ್ಮಾಣ ವೆಚ್ಚ
₹7.03 ಕೋಟಿ -ಎಸ್‌ಟಿಪಿ ನಿರ್ವಹಣೆ ವೆಚ್ಚ (10 ವರ್ಷ)
₹37.28 ಕೋಟಿ -ಒಟ್ಟು ಯೋಜನಾ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.