ADVERTISEMENT

ಎಸ್‌ಐ ಮೇಲೆ ಕಾರು ಹರಿಸಲು ಯತ್ನಿಸಿದ ಯುವತಿ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 20:04 IST
Last Updated 17 ಜುಲೈ 2013, 20:04 IST

ಬೆಂಗಳೂರು: ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಪೊಲೀಸರ ಮೇಲೆಯೇ ಯುವತಿಯೊಬ್ಬಳು ಕಾರು ಚಾಲನೆ ಮಾಡಲೆತ್ನಿಸಿದ ಘಟನೆ ಅನಿಲ್ ಕುಂಬ್ಳೆ ವೃತ್ತದಲ್ಲಿ  ಗುರುವಾರ ರಾತ್ರಿ ನಡೆದಿದೆ.

ಹೈಗ್ರೌಂಡ್ಸ್ ನಿವಾಸಿಯಾದ ಮೋನಿಷ್ ಹಾಗೂ ಆತನ ಪ್ರಿಯಕರೆ, ರಾತ್ರಿ 12 ಗಂಟೆ ಸುಮಾರಿಗೆ ಸೇಂಟ್ ಮಾರ್ಕ್ಸ್ ರಸ್ತೆ ಕಡೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಕುಂಬ್ಳೆ ವೃತ್ತದಲ್ಲಿ ಆ ಕಾರನ್ನು ಅಡ್ಡಗಟ್ಟಿದ ಕಬ್ಬನ್‌ಪಾರ್ಕ್ ಸಂಚಾರ ಠಾಣೆ ಪೊಲೀಸರು, ಚಾಲಕ ಪಾನಮತ್ತನಾಗಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಬಳಿಕ ಎಸ್‌ಐ ರಾಮಚಂದ್ರ ಅವರು ಕಾರಿನ ಕೀ ತೆಗೆದುಕೊಳ್ಳಲು ಮುಂದಾದಾಗ ಚಾಲಕ ಕೋಪಗೊಂಡು ಅವರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾನೆ.

ಮೋನಿಷ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಆತನ ಪ್ರಿಯತಮೆ, ಚಾಲಕನ ಸೀಟಿಗೆ ಬಂದು ಎಸ್‌ಐ ಮೇಲೆಯೇ ಕಾರು ಚಾಲನೆ ಮಾಡಲೆತ್ನಿಸಿದ್ದಾರೆ. ಅದೃಷ್ಟವಷಾತ್ ರಾಮಚಂದ್ರ ಅವರು ತಪ್ಪಿಸಿಕೊಂಡು ಎಡಬದಿಗೆ ಉರುಳಿಬಿದ್ದಿದ್ದಾರೆ. ಈ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯ ಸ್ಥಳಕ್ಕೆ ಬಂದ ಸಿಬ್ಬಂದಿ, ಕಾರನ್ನು ಠಾಣೆಗೆ ಕೊಂಡೊಯ್ದಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವತಿ, ಸ್ನೇಹಿತರಿಗೆ ಕರೆ ಮಾಡಿ ಠಾಣೆ ಬಳಿ ಬರುವಂತೆ ಹೇಳಿದ್ದಾಳೆ. ಹತ್ತು ನಿಮಿಷಗಳ ಅಂತರದಲ್ಲೇ ಠಾಣೆ ಬಳಿ ಬಂದ ಆಕೆಯ ಮೂರ್ನಾಲ್ಕು ಮಂದಿ ಸ್ನೇಹಿತರು, ಕಾರಿನ ಕೀ ಕೊಡುವಂತೆ ಪೊಲೀಸರಿಗೆ ಒತ್ತಡ ಹೇರಿದರು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.