ADVERTISEMENT

ಎಸ್‌ಪಿಪಿ ಹುದ್ದೆಗೆ ರಾಜೀನಾಮೆ ನೀಡಿದ ಬಿ.ವಿ. ಆಚಾರ್ಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 19:30 IST
Last Updated 14 ಆಗಸ್ಟ್ 2012, 19:30 IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು ಎಸ್‌ಪಿಪಿ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದರು.

ಏಳು ವರ್ಷಗಳಿಂದ ಅವರು ಈ ಪ್ರಕರಣದಲ್ಲಿ ಎಸ್‌ಪಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸ್ಥಾನದಲ್ಲಿ ಮುಂದುವರಿಯಬಾರದು ಎಂಬ ಕಾರಣದಿಂದ ಕಾಣದ ಕೈಗಳು ತಮ್ಮ ವಿರುದ್ಧ ಮಾಡಲಾದ ಸುಳ್ಳು ಆಪಾದನೆಗಳಿಂದ ಮನನೊಂದು ರಾಜೀನಾಮೆ ನೀಡಿರುವುದಾಗಿ ಆಚಾರ್ಯ ತಿಳಿಸಿದ್ದಾರೆ.

ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ನಾನು ಎಸ್‌ಪಿಪಿಯಾಗಿ ಮುಂದುವರಿಯಬಾರದು ಎಂಬ ಕಾರಣದಿಂದ ನನ್ನ ವಿರುದ್ಧ `ಬಿಎಂಎಸ್ ಶೈಕ್ಷಣಿಕ ಟ್ರಸ್ಟ್~ನಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ  ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಕೇಸು ದಾಖಲಾಯಿತು.

ಈ ದೂರನ್ನು ಹೈಕೋರ್ಟ್ ರದ್ದು ಮಾಡಿ ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿತು. ಆದರೆ, ನನ್ನ ವಿರುದ್ಧ ಇಂತಹ ಆಪಾದನೆ ಮಾಡಿದ್ದು, ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಕೋರ್ಟ್ ಆದೇಶಿಸಿದ್ದು ನನ್ನ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ.

`ಅಡ್ವೊಕೇಟ್ ಜನರಲ್ (ಎ.ಜಿ) ಆಗಿ ಕೆಲಸ ನಿರ್ವಹಿಸುತ್ತಿದ್ದಾಗ, ಇನ್ನೊಂದು ಕೇಸು ದಾಖಲು ಮಾಡಲಾಯಿತು. ಏಕಕಾಲಕ್ಕೆ ಎ.ಜಿ  ಹುದ್ದೆ ಹಾಗೂ ಎಸ್‌ಪಿಪಿ ಹುದ್ದೆ ಅಲಂಕರಿಸಿರುವುದು ಕಾನೂನುಬಾಹಿರ ಎಂಬ ಆರೋಪ ಹೊರಿಸಲಾಯಿತು. ಇದರಿಂದ ನಾನು ಎ.ಜಿ ಹುದ್ದೆಗೆ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು. ಉದ್ದೇಶಪೂರ್ವಕವಾಗಿ ಮಾಡಿದ ಈ ಆಪಾದನೆಯಿಂದಲೂ ನಾನು ಮಾನಸಿಕವಾಗಿ  ನೋವು ಅನುಭವಿಸಿದ್ದೇನೆ.

`ಅಷ್ಟೇ ಅಲ್ಲದೇ, ಜಯಲಲಿತಾ ಅವರ ಪ್ರಕರಣವು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದುಕೊಂಡಿದ್ದೆ. ಏಳು ವರ್ಷ ಕಳೆದರೂ ಇದುವರೆಗೂ ಅದು ಅಂತಿಮ ಹಂತ ತಲುಪಿಲ್ಲ. ಇದರಿಂದಲೂ ನನಗೆ ಬೇಸರವಾಗಿದೆ. ಇವೆಲ್ಲ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.