ಬೆಂಗಳೂರು: ಮುಂದಿನ ತಿಂಗಳ 15ರಿಂದ ಜನವರಿ 6ರ ವರೆಗೆ ಕೆಎಎಸ್ ಮುಖ್ಯ ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿದೆ. ಆದರೆ ಇದೇ ಅವಧಿಯಲ್ಲಿ ಬೇರೆ ಬೇರೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಇರುವುದರಿಂದ ಕೆಎಎಸ್ ಪರೀಕ್ಷಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
2011ನೇ ಸಾಲಿನ 362 ಕೆಎಎಸ್ ಹುದ್ದೆಗಳ ಭರ್ತಿಗೆ ಆಯೋಗವು ಈಗಾಗಲೇ ಪೂರ್ವಭಾವಿ ಪರೀಕ್ಷೆ ನಡೆಸಿದೆ. ಇದರಲ್ಲಿ ಅರ್ಹತೆ ಪಡೆದಿರುವ 7,300ಕ್ಕೂ ಅಧಿಕ ಮಂದಿ ಮುಖ್ಯ ಪರೀಕ್ಷೆಗೆ ಆರು ತಿಂಗಳಿಂದ ಸಿದ್ಧತೆ ನಡೆಸಿದ್ದಾರೆ.
ಆದರೆ, ಏಕಕಾಲದಲ್ಲಿ ಕೆಎಎಸ್, ಆರ್‌ಎಫ್‌ಒ, ಎನ್‌ಇಟಿ, ಇಲಾಖಾ ಪರೀಕ್ಷೆಗಳು ಬಂದಿರುವುದರಿಂದ ಯಾವ ಪರೀಕ್ಷೆ ಬರೆಯುವುದು ಎಂದು ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ.
`3-4 ಪರೀಕ್ಷೆ ಬರೆದರೆ ಒಂದರಲ್ಲಾದರೂ ಯಶಸ್ವಿಯಾಗಬಹುದು. ಕೇವಲ ಒಂದು ಪರೀಕ್ಷೆ ಬರೆದರೆ ಯಶಸ್ಸಿನ ಸಾಧ್ಯತೆ ಕಡಿಮೆ. ಕಷ್ಟಪಟ್ಟು ಓದಿದ್ದೇವೆ. ಈಗ ಪರೀಕ್ಷೆ ಬರೆಯುವ ಅವಕಾಶವನ್ನೇ ಕಲ್ಪಿಸಿಕೊಡದಿದ್ದರೆ ಹೇಗೆ~ ಎಂದು ನೊಂದ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು.
ನ್ಯಾಯಾಲಯದ ತಡೆಯಾಜ್ಞೆ ಶುಕ್ರವಾರ (ನ.16) ತೆರವಾಗುತ್ತಿದ್ದಂತೆಯೇ, ಕೆಪಿಎಸ್‌ಸಿ ತರಾತುರಿಯಲ್ಲಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. ಇದಕ್ಕೂ ಮೊದಲೇ ಅರಣ್ಯ ಇಲಾಖೆಯು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹುದ್ದೆಗಳ ಭರ್ತಿಗೆ ಡಿಸೆಂಬರ್ 15 ರಿಂದ 30ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿ ಪ್ರಕಟಿಸಿತ್ತು.
`ಇದಲ್ಲದೆ ವಿಶ್ವವಿದ್ಯಾಲಯ ಅನುದಾನ ಆಯೋಗವು ಡಿಸೆಂಬರ್ 30ರಂದು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ನಡೆಸುವುದಾಗಿ ನಾಲ್ಕು ತಿಂಗಳ ಮೊದಲೇ ಪ್ರಕಟಿಸಿತ್ತು. ಜತೆಗೆ ಕೆಪಿಎಸ್‌ಸಿಯ ಇಲಾಖಾ ಪರೀಕ್ಷೆಗಳು ಡಿಸೆಂಬರ್ ತಿಂಗಳಲ್ಲೇ ನಡೆಯಲಿವೆ. ಇದನ್ನು ಗಮನದಲ್ಲಿಟ್ಟುಕೊಳ್ಳದೆ ಆಯೋಗ ಅವೈಜ್ಞಾನಿಕವಾಗಿ ಕೆಎಎಸ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ~ ಎಂದು ಅಭ್ಯರ್ಥಿಗಳು ದೂರಿದರು.
ಬಹುತೇಕ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಂಗಳೂರು, ಹೈದರಾಬಾದ್, ನವದೆಹಲಿ ಸೇರಿದಂತೆ ವಿವಿಧೆಡೆ ಸ್ಪರ್ಧಾತ್ಮಕ ತರಬೇತಿ ಪಡೆದಿದ್ದಾರೆ.
ಈಗ ಏಕ ಕಾಲದಲ್ಲಿ 3-4 ಪರೀಕ್ಷೆಗಳು ನಡೆಯುತ್ತಿರುವುದರಿಂದ ಒಂದಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ತೆಗೆದುಕೊಂಡಿರುವವರಿಗೆ. ಆದ್ದರಿಂದ ಆಯೋಗವು ಕೂಡಲೇ ಕೆಎಎಸ್ ಪರೀಕ್ಷೆಯನ್ನು ಜನವರಿ ಅಂತ್ಯಕ್ಕೆ ಮುಂದೂಡಬೇಕು ಎಂದು ಆಗ್ರಹಿಸಿದರು.
ಆಯೋಗ ನಿಗದಿಪಡಿಸಿರುವ ಕೆಎಎಸ್ ಪರೀಕ್ಷೆಯ ವೇಳಾಪಟ್ಟಿ ಪ್ರಕಾರ ಡಿಸೆಂಬರ್ 30ರಂದು ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ, ಅರ್ಥಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಅದೇ ದಿನವೇ ಯುಜಿಸಿಯ ಎನ್‌ಇಟಿ ಪರೀಕ್ಷೆ ನಡೆಯಲಿದೆ.
`ಆರ್‌ಎಫ್‌ಒ ಹುದ್ದೆ ಭರ್ತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಯುಜಿಸಿಯ ಎನ್‌ಇಟಿ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದೇವೆ. ಈಗ ಆಯೋಗವು ಅದೇ ಅವಧಿಯಲ್ಲಿ ಕೆಎಎಸ್ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ. ಇದರಿಂದಾಗಿ ತೊಂದರೆಯಾಗಿದೆ. ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಭಯದಲ್ಲಿದ್ದೇವೆ~ ಎಂದು ಅಳಲು ತೋಡಿಕೊಂಡರು.
`ಉಪನ್ಯಾಸಕರ ಹುದ್ದೆಗೆ ಎನ್‌ಇಟಿ ಪರೀಕ್ಷೆ ಕಡ್ಡಾಯ. ಇದಕ್ಕೆ ಚೆನ್ನಾಗಿ ತಯಾರಿ ನಡೆಸಿದ್ದೇವೆ. ಆದರೆ ಆಯೋಗ ಕೆಎಎಸ್ ಪರೀಕ್ಷೆಯ ದಿನಾಂಕವನ್ನು ತರಾತುರಿಯಲ್ಲಿ ನಿಗದಿ ಮಾಡಿರುವುದರಿಂದ ಆತಂಕ ಉಂಟಾಗಿದೆ~ ಎಂದು ದೂರಿದರು.
ಬೇರೆ ಬೇರೆ ದಿನಾಂಕಗಳಂದು ಪರೀಕ್ಷೆ ನಡೆದರೆ ಒಂದರಲ್ಲಿ ಅವಕಾಶ ಸಿಗದಿದ್ದರೆ, ಮತ್ತೊಂದರಲ್ಲಿ ಸಿಗುತ್ತಿತ್ತು. ಎಲ್ಲ ಪರೀಕ್ಷೆಗಳು ಒಟ್ಟಿಗೆ ನಡೆದರೆ ಯಾವುದನ್ನು ಬರೆಯಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲ ಉಂಟಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ದೊರೆಯುವುದೇ ಕಷ್ಟ. ಭವಿಷ್ಯದ ದೃಷ್ಟಿಯಿಂದ ಎಲ್ಲ ಪರೀಕ್ಷೆಗಳು ಮುಖ್ಯ ಎನ್ನುತ್ತಾರೆ ಅಭ್ಯರ್ಥಿಗಳು.
`ಕೆಎಎಸ್ ಪರೀಕ್ಷೆ ಬರೆಯಲು ಅಂಗವಿಕಲ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಒಂದು ಗಂಟೆ ನೀಡಲಾಗುತ್ತದೆ. ಇದಕ್ಕೆ ಅನುಮತಿ ಪಡೆಯಲು ಮೊದಲೇ ಅರ್ಜಿ ಸಲ್ಲಿಸಬೇಕು. ಆದರೆ ಪರೀಕ್ಷಾ ದಿನಾಂಕ ಹತ್ತಿರದಲ್ಲಿ ಇರುವುದರಿಂದ ಅನುಮತಿಗಾಗಿ ಓಡಾಡುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ.
ಎನ್‌ಇಟಿಗೆ ತಯಾರಾಗಿರುವ ನಾವು ಕೆಪಿಎಸ್‌ಸಿ ಪರೀಕ್ಷೆಗೆ ಓದುವುದು ಯಾವಾಗ~ ಎಂಬುದು ಅಂಗವಿಕಲ ವಿದ್ಯಾರ್ಥಿಗಳು ಅಳಲು.
`ಒಂದು ಆಯ್ಕೆಗೆ ಮಾತ್ರ ಅವಕಾಶ~
ಬೆಂಗಳೂರು: ಕೆಎಎಸ್ ಪರೀಕ್ಷೆಯ ವೇಳಾಪಟ್ಟಿಯನ್ನು ನಿಗದಿ ಮಾಡುವಾಗ ನಾವು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಮಾತ್ರ ಗಮನಿಸುತ್ತೇವೆ. ಈಗ ನಿಗದಿ ಮಾಡಿರುವ ಅವಧಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಇಲ್ಲ. ಇತರೆ ಸಣ್ಣಪುಟ್ಟ ಪರೀಕ್ಷೆಗಳನ್ನು ನೋಡಿ ನಾವು ವೇಳಾಪಟ್ಟಿ ಸಿದ್ಧಪಡಿಸಲು ಆಗುವುದಿಲ್ಲ.
ಆರ್‌ಎಫ್‌ಒ ಹುದ್ದೆಗಳ ಪರೀಕ್ಷೆ ಮುಂದೂಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಿ. ಅವು 70-80 ಹುದ್ದೆಗಳು ಇರಬಹುದು. ಆದರೆ ಆಯೋಗವು 362 ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ. ಈಗ ಕೆಎಎಸ್ ಪರೀಕ್ಷೆ ಮುಂದೂಡಿದರೆ ಮುಂದೆ ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ.
ಕೆಲ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಮುಂದೂಡುತ್ತಾ ಹೋದರೆ, ಯಾವ ಪರೀಕ್ಷೆಯನ್ನೂ ನಡೆಸಲು ಆಗುವುದಿಲ್ಲ. ಯಾವ ಪರೀಕ್ಷೆ ಮುಖ್ಯ ಎಂಬುದನ್ನು ಅಭ್ಯರ್ಥಿಗಳೇ ನಿರ್ಧರಿಸಿ, ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
- ಗೋನಾಳ ಭೀಮಪ್ಪ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.