ಬೆಂಗಳೂರು: ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಸ್ಥಾಪನೆ ಕುರಿತು ರಾಜ್ಯ ಸರ್ಕಾರದ ನಿಲುವನ್ನು ಪ್ರಧಾನ ಮಂತ್ರಿ ಅವರು ಸೋಮವಾರ ಆಯೋಜಿಸಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಸ್ಪಷ್ಟಪಡಿಸುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ವಿಧಾನಸೌಧದ ಮುಂದಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಹಲವು ರಾಜ್ಯಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಎನ್‌ಸಿಟಿಸಿ ಸ್ಥಾಪನೆಗೆ ಏಕಾಏಕಿ ಮುಂದಾಗಿರುವುದು ಸರಿಯಲ್ಲ. ಈ ಕುರಿತು ರಾಜ್ಯದ ನಿಲುವನ್ನು ಸೋಮವಾರದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗುವುದು~ ಎಂದರು.
ರಾಜ್ಯಗಳ ಅಭಿಪ್ರಾಯ ಪಡೆಯದೆ ಕೇಂದ್ರ ಸರ್ಕಾರ ಎನ್‌ಸಿಟಿಸಿಯನ್ನು ಹೇರಲು ಹೊರಟಿರುವುದು ಸರಿಯಲ್ಲ. ಈ ಕ್ರಮದ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡಲು ಯತ್ನಿಸುತ್ತಿರುವಂತೆ ಇದೆ ಎಂದು ಅವರು ಟೀಕಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಶೋಷಿತ ಸಮುದಾಯಗಳಿಗೆ ಘನತೆಯ ಬದುಕು ನೀಡಲು ಶ್ರಮಿಸಿದವರು. ಅಂಬೇಡ್ಕರ್ ಅವರು ಕೇವಲ ಘೋಷಣೆಗಳಿಗಷ್ಟೇ ತೃಪ್ತಿ ಹೊಂದಿದವರಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಘೋಷಣೆ ಕೂಗಿದರು.
ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ವಿಧಾನ ಪರಿಷತ್ತಿನ ಸದಸ್ಯ ಡಿ.ಎಸ್. ವೀರಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.