ADVERTISEMENT

ಏಲಕ್ಕಿ ಬಳೆಗಾರರಿಗೆ ಪರಿಹಾರ: ಸರ್ಕಾರಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಕೊಡಗಿನ ಜಮ್ಮಾ ಮಲೆ ಪ್ರದೇಶದ ಏಲಕ್ಕಿ ಹಿಡುವಳಿದಾರರಿಗೆ ಪರಿಹಾರ ನೀಡಲು ಸುಮಾರು 60-70 ಕೋಟಿ ರೂಪಾಯಿಗಳ ಅಗತ್ಯ ಇದೆ ಎನ್ನುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಿಧಾನಸಭೆಯ ಅಧ್ಯಕ್ಷ, ವಿರಾಜಪೇಟೆ ಶಾಸಕರೂ ಆದ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

ಇದೇ 14ರಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಉಪಸ್ಥಿತಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಡಿಕೇರಿ ತಾಲ್ಲೂಕಿನ ಕುಂಜಲಗೇರಿ, ಬಲ್ಲಮಾವಟಿ ಮತ್ತು ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುಮಾರು 8,500 ಎಕರೆ ವಿಸ್ತೀರ್ಣದ ಜಮ್ಮಾ ಮಲೆ ಪ್ರದೇಶದ ಏಲಕ್ಕಿ ಹಿಡುವಳಿದಾರರ ಕುರಿತು ಚರ್ಚೆ ನಡೆದಿತ್ತು.

ಬದಲಾದ ಸಂದರ್ಭದಲ್ಲಿ ಈ ಪ್ರದೇಶದ ಹಿಡುವಳಿದಾರರಿಗೆ ಏಲಕ್ಕಿಯೊಂದನ್ನೇ ಬೆಳೆಯಲು ಸಾಧ್ಯವಿಲ್ಲದ ಕಾರಣ ಅವರು ತಮ್ಮ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವ ಕುರಿತು ಮನವಿ ಸಲ್ಲಿಸಿದ್ದರು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಹಿಡುವಳಿದಾರರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೋಪಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಡಗಿನ ಎಲ್ಲ ಬಾಣೆ ಜಾಗಗಳನ್ನು ಸರ್ಕಾರದ ವಶಕ್ಕೆ ಕೊಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಅರಣ್ಯ ಇಲಾಖೆ ಇತ್ತೀಚೆಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವುದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಸರ್ಕಾರದ ವಶಕ್ಕೆ ನೀಡಲು ಒಪ್ಪಿಗೆ ನೀಡಿರುವುದು ಜಮ್ಮಾ ಮಲೆಯ ಏಲಕ್ಕೆ ಹಿಡುವಳಿದಾರರ ಭೂಮಿ ಮಾತ್ರ ಎಂದು ಬೋಪಯ್ಯ ಸ್ಪಷ್ಟನೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.