ADVERTISEMENT

ಐವರು ಯುವಕರ ಸಾವು

ಕನಕಪುರ ರಸ್ತೆಯಲ್ಲಿ ಭೀಕರ ಅಪಘಾತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:49 IST
Last Updated 14 ಸೆಪ್ಟೆಂಬರ್ 2013, 19:49 IST
ಐವರು ಯುವಕರ ಸಾವು
ಐವರು ಯುವಕರ ಸಾವು   

ಬೆಂಗಳೂರು: ನಗರದ ಹೊರ ವಲ­ಯದ ಕನಕಪುರ ರಸ್ತೆಯ ಸೋಮನಹಳ್ಳಿ ಬಳಿ ಶನಿವಾರ ಸಂಜೆ ಕಾರು ಮತ್ತು ಬಿಎಂಟಿಸಿ ಬಸ್‌ ನಡುವೆ ಸಂಭವಿಸಿದ ಅಪಘಾತ­ದಲ್ಲಿ ಐವರು  ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಶೋಕನಗರದ ಸೈಯದ್‌ ಅಯೂಬ್‌  ಪಾಷಾ, ಮಹಮ್ಮದ್‌ ಜುನೇದ್‌, ನೀಲಸಂದ್ರದ ಯಾರಬ್‌ ಅಬ್ಬಾಸ್‌್, ಯಾಸೀರ್‌ ಖಾನ್‌ ಮತ್ತು ಶಾಂತಿನಗರದ ಮಯೂರ ಶರ್ಮ ಮೃತಪಟ್ಟವರು. ಸ್ನೇಹಿತರಾದ ಅವರು ಕನಕಪುರ ಸಮೀಪದ ಮೇಕೆದಾಟುಗೆ ಪ್ರವಾಸ ಹೋಗಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಾರಿನಲ್ಲಿ ನಗರಕ್ಕೆ ವಾಪಸ್‌ ಬರುತ್ತಿ­ದ್ದಾಗ ಈ ದುರ್ಘಟನೆ ನಡೆದಿದೆ.

ಪಾನಮತ್ತನಾಗಿ ಕಾರು ಚಾಲನೆ ಮಾಡುತ್ತಿದ್ದ ಯಾಸೀರ್‌ ಖಾನ್‌, ಮತ್ತೊಂದು ವಾಹನವನ್ನು ಹಿಂದಿಕ್ಕುವ ಯತ್ನದಲ್ಲಿ ಕಾರಿನ ಮುಂದಿನ ಟಯರ್‌ ಸ್ಫೋಟಗೊಂಡಿದೆ. ಇದರಿಂದಾಗಿ ಆತನ ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿ ಚಲಿಸಿದ ಕಾರು, ಎದುರುಗಡೆಯಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಐದೂ ಮಂದಿ ಸ್ಥಳದಲ್ಲೇ ಸಾವನ್ನಪ್ಪಿ­ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು 18ರಿಂದ 25 ವರ್ಷ ವಯೋಮಾನದವರು. ಅಪಘಾತ ಸಂಭವಿಸುವುದಕ್ಕೂ ಮುಂಚೆ ಅವರು ಸೋಮನಹಳ್ಳಿ ಸಮೀಪದ ನೆಲಗುಳಿ ಗ್ರಾಮದ ರೆಸಾರ್ಟ್ ಒಂದರಲ್ಲಿ ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‌‘ವೇಗವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ರಸ್ತೆಯ ಬಲ ಭಾಗಕ್ಕೆ ನುಗ್ಗಿ ಬಸ್‌ಗೆ ಡಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ­ವ­ರನ್ನು ರಕ್ಷಿಸಲು ಯತ್ನಿಸಿದೆವು. ಆದರೆ, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಐದೂ ಮಂದಿ ವಾಹನದಲ್ಲೇ ಸಾವನ್ನಪ್ಪಿದ್ದರು’ ಎಂದು ಪ್ರತ್ಯಕ್ಷದರ್ಶಿ ರವಿಶೇಖರ್‌ ಹೇಳಿದರು.

ಬಿಎಂಟಿಸಿ ಬಸ್‌ ಸಿಟಿ ಮಾರುಕಟ್ಟೆ­ಯಿಂದ ಕೆಂಪಯ್ಯನಪಾಳ್ಯಕ್ಕೆ (ಮಾರ್ಗ ಸಂಖ್ಯೆ 213ಡಿ) ಹೋಗು­ತ್ತಿತ್ತು. ಅಪ­ಘಾತ­ಕ್ಕೀಡಾದ ಕಾರಿನೊಳಗೆ ಸಿಲುಕಿದ್ದ ಶವಗಳನ್ನು ಪೊಲೀಸರು, ಗ್ಯಾಸ್‌ ಕಟರ್‌ ಬಳಸಿ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿ­ದರು. ಘಟನೆಯಿಂದಾಗಿ ಕನಕಪುರ ರಸ್ತೆ­ಯಲ್ಲಿ 30 ನಿಮಿಷಕ್ಕೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾ­ರರು ಪರದಾಡಿದರು. ಪೊಲೀಸರು ಕ್ರೇನ್‌ನ ಸಹಾಯದಿಂದ ಬಸ್‌ ಮತ್ತು ಕಾರನ್ನು ರಸ್ತೆ ಬದಿಗೆ ಸರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಜುನೇದ್‌ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಯಾಸೀರ್‌ ಖಾನ್ ಬಿಬಿಎಂ ವಿದ್ಯಾರ್ಥಿ­ಯಾಗಿದ್ದ. ಸೈಯದ್‌ ಅಯೂಬ್‌  ಪಾಷಾ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ಮಯೂರ ಶರ್ಮ ಮೊಬೈಲ್‌ ಅಂಗಡಿಯಲ್ಲಿ ಮತ್ತು ಯಾರಬ್‌ ಅಬ್ಬಾಸ್‌್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.ಘಟನೆ ಸಂಬಂಧ ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್‌ ಚಾಲಕನನ್ನು ವಶಕ್ಕೆ ತೆಗೆದು­ಕೊಂಡಿದ್ದಾರೆ.

ಕಿರಿದಾದ ರಸ್ತೆ: ‘ಕನಕಪುರ ರಸ್ತೆ ತುಂಬಾ ಕಿರಿದಾಗಿದೆ. ಅಲ್ಲದೇ ರಸ್ತೆ ವಿಭಜಕ ಹಾಗೂ ರಸ್ತೆ ಉಬ್ಬುಗಳನ್ನು ನಿರ್ಮಿಸಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ರಸ್ತೆ ಉಬ್ಬು, ಸ್ಕೈವಾಕ್‌ ಮತ್ತು ರಸ್ತೆ ವಿಭಜಕ ನಿರ್ಮಿಸುವಂತೆ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ದೂರಿದರು.

‘ಅನುಭವಿ ಚಾಲಕ’
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಿಎಂಟಿಸಿ ದಕ್ಷಿಣ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ರಾಮ­ಮೂರ್ತಿ, ‘ಬಸ್‌ ಚಾಲಕ ಮಲ್ಲಪ್ಪ ಹುಂಡಿ ಅನುಭವಿ ಚಾಲಕನಾಗಿದ್ದು, ಅವರಿಗೆ ಹತ್ತು ವರ್ಷದ ಸೇವಾ­ನು­ಭವ ಇದೆ. ಕಾರು ಚಾಲಕ ಯಾಸೀರ್‌ ಖಾನ್‌ ನಿರ್ಲಕ್ಷ್ಯವೇ ಅಪ­ಘಾತಕ್ಕೆ ಕಾರಣ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.