ADVERTISEMENT

ಒಕ್ಕಲಿಗರ ಒಡೆಯವ ಷಡ್ಯಂತ್ರ

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಬೆಂಗಳೂರು: `ಕುಂಚಿಟಿಗರು ಹಾಗೂ ಒಕ್ಕಲಿಗರು ಬೇರೆ ಬೇರೆ ಎಂದು ಬಿಂಬಿಸುವ ಮೂಲಕ ಅಖಂಡ ಒಕ್ಕಲಿಗ ಸಮುದಾಯವನ್ನು ಒಡೆಯುವ ಷಡ್ಯಂತ್ರಗಳು ನಡೆಯುತ್ತಿವೆ~ ಎಂದು ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕುಂಚಿಟಿಗರು ಹಾಗೂ ಒಕ್ಕಲಿಗರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಾವಿರಾರು ವರ್ಷಗಳಿಂದ ಒಂದೇ ಸಮುದಾಯದಡಿ ಎರಡೂ ಪಂಗಡಗಳು ಸಂಘಟಿತವಾಗುತ್ತಾ ಬಂದಿವೆ. ಆದರೆ ಇತ್ತೀಚೆಗೆ ಸಂಘಟಿತ ಒಕ್ಕಲಿಗ ಸಮುದಾಯವನ್ನು ಒಡೆಯುವ ಪ್ರಯತ್ನಗಳಾಗುತ್ತಿವೆ. ಒಂದೇ ಸಮುದಾಯದ ಪಂಗಡಗಳಲ್ಲಿ ಬಿರುಕು ಮೂಡಿಸುವ ಕೆಟ್ಟ ಕೆಲಸಗಳು ನಡೆಯುತ್ತಿವೆ~ ಎಂದರು.

`ಒಕ್ಕಲಿಗರಿಂದ ಕುಂಚಿಟಿಗರ ಶೋಷಣೆ ನಡೆಯುತ್ತಿದೆ ಹಾಗೂ ರಾಜಕೀಯವಾಗಿ ಅನ್ಯಾಯವಾಗುತ್ತಿದೆ ಎಂಬ ವಿತಂಡ ವಾದಗಳನ್ನು ಕೆಲವರು ಮಾಡುತ್ತಿದ್ದಾರೆ. ವಾಸ್ತವವಾಗಿ ಕುಂಚಿಟಿಗರು ಒಕ್ಕಲಿಗರು ಬೇರೆ ಬೇರೆ ಅಲ್ಲ. ಕುಂಚಿಟಿಗರೂ ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ. ಹೀಗಾಗಿ ಇಲ್ಲಿ ಶೋಷಣೆಯ ಮಾತೇ ಬರುವುದಿಲ್ಲ. ಕೆಲವರು ಈ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ನನಗೆ ತಿಳಿದಿಲ್ಲ~ ಎಂದು ಅವರು ಹೇಳಿದರು.

`ಭಾನುವಾರ ನಡೆದ ಕುಂಚಿಟಿಗರ ಸಮಾವೇಶದಲ್ಲಿ ಶಾಂತವೀರ ಸ್ವಾಮೀಜಿ ಅವರು ಅಧ್ಯಯನದ ಕೊರತೆಯಿಂದ ಕುಂಚಿಟಿಗರು ಹಾಗೂ ಒಕ್ಕಲಿಗರು ಬೇರೆ ಬೇರೆ; ಬಹುಸಂಖ್ಯಾತ ಒಕ್ಕಲಿಗರಿಂದ ಕುಂಚಿಟಿಗರ ಮೇಲೆ ಸಾಮಾಜಿಕ ಹಾಗೂ ರಾಜಕೀಯ ದಬ್ಬಾಳಿಕೆ ನಡೆಯುತ್ತಿದೆ ಎಂದಿದ್ದಾರೆ. ಆದರೆ ಅಂತಹ ಯಾವುದೇ ದಬ್ಬಾಳಿಕೆಗಳು ಒಕ್ಕಲಿಗ ಸಮುದಾಯದಿಂದ ಆಗಿಲ್ಲ. ಕುಂಚಿಟಿಗರನ್ನು ತುಳಿಯುವ ಉದ್ದೇಶ ಒಕ್ಕಲಿಗರಿಗೆ ಇದ್ದಿದ್ದರೆ ಎಚ್.ಡಿ.ದೇವೇಗೌಡರು ಬಿ.ಎಲ್.ಗೌಡರನ್ನು ಹಾಗೂ ಎಸ್.ಎಂ.ಕೃಷ್ಣ ಅವರು ಟಿ.ಬಿ.ಜಯಚಂದ್ರ ಅವರನ್ನು ರಾಜಕೀಯವಾಗಿ ಬೆಂಬಲಿಸುತ್ತಿರಲಿಲ್ಲ~ ಎಂದು ಅವರು ನುಡಿದರು.

`ಕುಂಚಿಟಿಗರು ತಮ್ಮ ಪಂಗಡವನ್ನು ಪ್ರವರ್ಗ ಒಂದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಈಡೇರಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಈ ವಿಚಾರದಲ್ಲಿ ಒಕ್ಕಲಿಗರು ಮಧ್ಯ ಪ್ರವೇಶ ಮಾಡಿ ಸರ್ಕಾರದಿಂದ ಬರುವ ಮೀಸಲಾತಿಗಳಿಗೆ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳ್ಳು ಆರೋಪಗಳು ಕೇಳಿ ಬರುತ್ತಿವೆ~ ಎಂದರು.

`ಸಾವಿರಾರು ವರ್ಷಗಳಿಂದ ಒಕ್ಕಲಿಗರು ಎಂದೇ ಗುರುತಿಸಿಕೊಂಡು ಬಂದಿರುವ ಕುಂಚಿಟಿಗರು ಈಗ ಏಕಾಏಕಿ ಸಮುದಾಯದಿಂದ ಹೊರ ಹೋಗಲು ಸಿದ್ಧರಿಲ್ಲ. ನೂರಾರು ವರ್ಷಗಳ ಹಿಂದೆ ಒಕ್ಕಲಿಗ ಸಮುದಾಯದಿಂದ ಬೇರಾಗಿ ವೀರಶೈವರೇ ಆಗಿರುವ `ಕುಂಚಿಟಿಗ ಲಿಂಗಾಯಿತ~ರನ್ನು ಮತ್ತೆ ಒಕ್ಕಲಿಗ ಸಮುದಾಯದ ಜತೆಗೆ ಸೇರಿಸಬೇಕು ಎನ್ನುವ ಮೂಲಕ ಕೆಲವರು ಸಮುದಾಯವನ್ನು ಒಡೆಯಲು ಮುಂದಾಗಿದ್ದಾರೆ. ಈ ಕಾರ್ಯದಲ್ಲಿ ಅವರು ಸಫಲರಾಗುವುದಿಲ್ಲ~ ಎಂದು ಅವರು ಹೇಳಿದರು.

`ತಮಿಳುನಾಡಿನಲ್ಲಿ ಕುಂಚಿಟಿಗರನ್ನು `ಕಾಪು ಒಕ್ಕಲಿಗರು~ ಎಂದೇ ಗುರುತಿಸಲಾಗುತ್ತಿದೆ. ವಾಸ್ತವವಾಗಿ ಒಕ್ಕಲಿಗರು ಹಾಗೂ ಕುಂಚಿಟಿಗರಲ್ಲಿ ಯಾವ ವ್ಯತ್ಯಾಸಗಳೂ ಇಲ್ಲ. ಒಕ್ಕಲಿಗ ಎಂಬುದು ಅನೇಕ ಪಂಗಡಗಳ ಒಂದು ಬೃಹತ್ ಸಮುದಾಯವೇ ಹೊರತು ಕೇವಲ ಒಂದು ಸಂಕುಚಿತ ಜಾತಿಯಲ್ಲ. ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಕುಂಚಿಟಿಗರು ನಡೆಸುತ್ತಿರುವ ಹೋರಾಟಕ್ಕೆ ಒಕ್ಕಲಿಗರ ಬೆಂಬಲವೂ ಇದೆ. ಹೀಗಾಗಿ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

`ಯಾರು, ಏನೇ ವಿವಾದಗಳನ್ನು ಸೃಷ್ಟಿಸಿದರೂ ಜೂನ್ ಮೂರರಂದು ನಡೆಯುವ ಗುರುವಂದನೆ ಹಾಗೂ ಒಕ್ಕಲಿಗರ ಸಮಾವೇಶದಲ್ಲಿ ಸಾವಿರಾರು ಜನ ಕುಂಚಿಟಿಗರೂ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಈಗಾಗಲೇ ಜಿಲ್ಲೆಗಳಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ~ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಂಚಿಟಿಗ ಸಮುದಾಯದ ಅಂದಾನಪ್ಪ, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಜೂನ್ 3ರಂದು ಗುರುವಂದನೆ

`ಬಡ ವಿದ್ಯಾರ್ಥಿಗಳ ಅಕ್ಷರ ದಾಸೋಹಿ ಹಾಗೂ ಸಮುದಾಯದ ಸಂಘಟನಾ ಶಕ್ತಿಯಾದ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗುರುವಂದನೆ ಮತ್ತು ಒಕ್ಕಲಿಗರ ಸಮಾವೇಶವು ಜೂನ್ ಮೂರರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ತುಮಕೂರು, ಚಿತ್ರದುರ್ಗ, ರಾಮನಗರ, ಶಿವಮೊಗ್ಗ ಹಾಗೂ ಇನ್ನಿತರ ಜಿಲ್ಲೆಗಳಿಂದ ಸಾವಿರಾರು ಜನ ಒಕ್ಕಲಿಗರು ಸಮಾವೇಶಕ್ಕೆ ಆಗಮಿಸಲಿದ್ದಾರೆ~ ಎಂದು ಸ್ವಾಮೀಜಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.