ADVERTISEMENT

ಒಗ್ಗೂಡಿದರೆ ಅಭಿವೃದ್ಧಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST
ಒಗ್ಗೂಡಿದರೆ ಅಭಿವೃದ್ಧಿ ಸಾಧ್ಯ
ಒಗ್ಗೂಡಿದರೆ ಅಭಿವೃದ್ಧಿ ಸಾಧ್ಯ   

ಬೆಂಗಳೂರು: `ಎಲ್ಲ ಮುಖಂಡರು ಪಕ್ಷಭೇದ ಮರೆತು ಸಂಘಟಿತರಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ~ ಎಂದು ಗೃಹ ಸಚಿವ ಆರ್. ಅಶೋಕ ಹೇಳಿದರು.

ವಿಶ್ವ ಒಕ್ಕಲಿಗರ ಮಹಾ ವೇದಿಕೆಯು ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

`ಒಕ್ಕಲಿಗ ಸಮುದಾಯದಲ್ಲಿ ಒಗ್ಗಟ್ಟಿನ ಬಗ್ಗೆ ಸಾಕಷ್ಟು ಆತಂಕಗಳು ಕಾಡುತ್ತಿವೆ. ಈ ಆತಂಕಗಳನ್ನು ನಿವಾರಿಸಲು ಸಮುದಾಯದ ಮುಖಂಡರು ಮುಂದಾದರೆ ಹೆಚ್ಚಿನ ಅಭಿವೃದ್ಧಿ ಕಾಣಬಹುದು. ಪಕ್ಷ ಹಾಗೂ ವೈಯಕ್ತಿಕ ವಿಷಯಗಳನ್ನು ಸಮುದಾಯದ ವೇದಿಕೆಯ ಮೇಲೆ ಪ್ರಸ್ತಾಪಿಸದೇ ಇರುವ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು~ ಎಂದರು.

`ಒಕ್ಕಲಿಗ ಸಮುದಾಯದವರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರೊಂದಿಗೆ ಚರ್ಚಿಸಿ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ಕಲ್ಪಿಸಲಾಗುವುದು~ ಎಂದು ಭರವಸೆ ನೀಡಿದರು.

ವೇದಿಕೆ ಅಧ್ಯಕ್ಷ ವೈ.ಡಿ. ರವಿಶಂಕರ್, `ವಿಶ್ವ ಒಕ್ಕಲಿಗರ ಮಹಾ ವೇದಿಕೆ ಹಾಗೂ ರಾಜಾಜಿನಗರ ಒಕ್ಕಲಿಗರ ಹಿತರಕ್ಷಣಾ ವೇದಿಕೆಯು ಪ್ರತಿ ವರ್ಷ ಸಂಕ್ರಾಂತಿ ಹಬ್ಬವನ್ನು ಒಕ್ಕಲಿಗರ ಹಬ್ಬ ಎಂಬ ಪರಿಕಲ್ಪನೆಯಡಿ ಆಚರಿಸುತ್ತಿವೆ. ನಗರವಾಸಿಗಳಿಗೆ ಸಂಕ್ರಾಂತಿ ಹಬ್ಬದ ಸೊಬಗು ಹಾಗೂ ನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ~ ಎಂದರು.

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು. ರಾಜಾಜಿನಗರ 1ನೇ ಬ್ಲಾಕ್‌ನಿಂದ ರಾಮಮಂದಿರ ಆಟದ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಸಿ.ಪಿ. ಯೋಗೇಶ್ವರ್, ಶಾಸಕರಾದ ಡಿ.ಕೆ. ಶಿವಕುಮಾರ್, ಎಚ್.ಸಿ. ಬಾಲಕೃಷ್ಣ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್, ರಾಜಾಜಿನಗರದ ಒಕ್ಕಲಿಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎ.ಆನಂದ್, ಉಪಾಧ್ಯಕ್ಷ ಗಂಗಭೈರಯ್ಯ, ಪ್ರಧಾನ ಕಾರ್ಯದರ್ಶಿ ಗಂಗಾಧರಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.