ನವದೆಹಲಿ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸ್ಥಾಪಿಸಲು ಉದ್ದೇಶಿಸಿರುವ `ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ'ಕ್ಕೆ (ಐಟಿಐಆರ್) ಸ್ಥಳೀಯರಿಂದ ವಿರೋಧ ಬರಬಹುದು ಎನ್ನುವ ಆತಂಕದಿಂದ ರಾಜ್ಯ ಸರ್ಕಾರ ಕೃಷಿಗೆ ಯೋಗ್ಯವಲ್ಲದ ಜಮೀನು ಮಾತ್ರ ಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಿದೆ.
`ಐಟಿಐಆರ್ ಯೋಜನೆ'ಗೆ 10,500 ಎಕರೆ ಭೂಮಿ ಅಗತ್ಯವಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕುಗಳ 45 ಕಂದಾಯ ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಈಗಾಗಲೇ ಯೋಜನೆಗೆ ಸ್ವಾಧೀನ ಮಾಡಿಕೊಳ್ಳಲಿರುವ ಭೂಮಿ ಗುರುತಿಸಿದೆ. ಮೊದಲ ಹಂತದಲ್ಲಿ 2072 ಎಕರೆ ಭೂಮಿ ವಶಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.
ಉಳಿದ 8,400 ಎಕರೆ ಭೂಮಿಯನ್ನು 2020ನೇ ಇಸವಿಯಿಂದ ವಶಪಡಿಸಿಕೊಳ್ಳುವ ಉದ್ದೇಶವಿದೆ. ರೈತರಿಗೆ ತೊಂದರೆಯಾಗದಂತೆ ಕೃಷಿ ಯೋಗ್ಯವಲ್ಲದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಿಗೆ ಅನೌಪಚಾರಿಕವಾಗಿ ತಿಳಿಸಿದರು. ರಾಜ್ಯ ಸರ್ಕಾರ ಈ ವಿಷಯವನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೂ ತಂದಿದೆ.
ಕೃಷಿಗೆ ಯೋಗ್ಯವಲ್ಲದ ಒಣ ಭೂಮಿಯನ್ನು ಯೋಜನೆಗೆ ಸ್ವಾಧೀನ ಮಾಡಿಕೊಳ್ಳಲಾಗುವುದು. ಜನ ವಸತಿಗಳ ತಂಟೆಗೆ ಹೋಗುವುದಿಲ್ಲ. ವಶಪಡಿಸಿಕೊಂಡ ಭೂಮಿಗೆ ಹೆಚ್ಚಿನ ಪರಿಹಾರ ಕೊಡಲಾಗುವುದು ಎಂದು ರಾಜ್ಯ ಸರ್ಕಾರದ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.
ಭೂಸ್ವಾಧೀನ ಮಸೂದೆಗೆ ಇನ್ನೂ ಸಂಸತ್ತಿನ ಅಂಗೀಕಾರ ದೊರೆಯದಿರುವುದರಿಂದ ಸ್ವಾಧೀನ ಪ್ರಕ್ರಿಯೆ ದೊಡ್ಡ ಸವಾಲಾಗಬಹುದು ಎಂದು ಭಾವಿಸಲಾಗಿದೆ.
ಐಟಿಐಆರ್ ಯೋಜನೆ 1.2 ಲಕ್ಷ ಪ್ರತ್ಯಕ್ಷ ಹಾಗೂ 2.8 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಯೋಜನೆಗೆ ರೂ1.06 ಲಕ್ಷ ಕೋಟಿ ಬಂಡವಾಳ ಆಕರ್ಷಿಸುವ ಗುರಿ ಇದೆ. 2030ರ ವೇಳೆಗೆ ಇದು ವಾರ್ಷಿಕ ರೂ2.01 ಲಕ್ಷ ಕೋಟಿ ವಹಿವಾಟು ನಡೆಸಲಿದೆ. ರಸ್ತೆ ಹಾಗೂ ಮೆಟ್ರೋ ರೈಲು ಅಭಿವೃದ್ಧಿಗೆ ಕೇಂದ್ರದಿಂದ ರೂ7010 ಕೋಟಿ ನೆರವು ಕೇಳಲಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರಕ್ಕೆ 14 ಕಿ.ಮೀ ದೂರದಲ್ಲಿರುವ ಯೋಜನೆ ನಗರದಿಂದ 44 ಕಿ.ಮೀ. ದೂರದಲ್ಲಿ ಬರಲಿದೆ. ರೈತರಿಗೆ ತೊಂದರೆ ಆಗದಂತೆ ಕೃಷಿ ಯೋಗ್ಯವಲ್ಲದ ಒಣ ಭೂಮಿಯನ್ನು ಯೋಜನೆಗೆ ವಶಪಡಿಸಿಕೊಳ್ಳಲಾಗುವುದು. ರೈತರ ಮನೆ ಮಠಗಳನ್ನು ಮುಟ್ಟುವ ತಂಟೆಗೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.