ADVERTISEMENT

`ಓದುಗರಲ್ಲಿ ಒಳನೋಟ ರೂಪಿಸುವ ಪತ್ರಗಳು'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 20:14 IST
Last Updated 5 ಸೆಪ್ಟೆಂಬರ್ 2013, 20:14 IST

ಬೆಂಗಳೂರು: `ಪತ್ರಗಳು ಚರಿತ್ರೆಯ ದಾಖಲೆಗಳು. ಸಾಹಿತ್ಯಿಕವಾಗಿ ಇತರೆ ಪ್ರಕಾರಗಳಿಗಿಂತ ಭಿನ್ನವಾಗಿದ್ದರೂ ಓದುಗರಲ್ಲಿ ಒಳನೋಟಗಳನ್ನು ರೂಪಿಸುತ್ತದೆ' ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಯು.ಆರ್.ಅನಂತಮೂರ್ತಿ ಗೌರವ ಮಾಲಿಕೆ  ಕೃತಿಗಳ ಭಾಗವಾಗಿ ಅಭಿನವ ಪ್ರಕಾಶನವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯನಾಥ ಶೆಣೈ ಅವರ `ಪತ್ರ ವಾತ್ಸಲ್ಯ', ಬಸವರಾಜ ಕಲ್ಗುಡಿ ಅವರ `ಮೈಯೇ ಸೂರು ಮನವೇ ಮಾತು', ಕೆ.ಪಿ.ಭಟ್ ಅವರ `ಭಾಷೆ ಮತ್ತು ಸಾಮಾಜಿಕ ಸಂದರ್ಭ' ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

`ಗಾಂಧಿ ಹಾಗೂ ಟ್ಯಾಗೋರ್ ಅವರ ಪತ್ರ ಸಂವಾದವೂ ವ್ಯಕ್ತಿತ್ವದ ಹಲವು ಮಜಲುಗಳನ್ನು ಅರಿಯಲು ನೆರವಾಗುತ್ತದೆ. ಅಂತೆಯೇ ಈ `ಪತ್ರ ವಾತ್ಸಲ್ಯ' ಪುಸ್ತಕವೂ ಕೂಡ ಹಲವು ಹೊಳಹುಗಳನ್ನು ನೀಡುತ್ತಲೇ ಬದುಕಿನ ದಿಗ್ದರ್ಶನ ಮಾಡಿಸುತ್ತದೆ' ಎಂದು ಶ್ಲಾಘಿಸಿದರು.

`ಇತರೆ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಿದ್ದರೂ ಕೂಡ ಬಸವರಾಜ ಕಲ್ಗುಡಿ ಅಂತಹವರು ವಿ.ವಿಯಲ್ಲಿ ಕಾರ್ಯನಿರ್ವಹಿಸಿಯೂ ಹೊಸ ಮಾಹಿತಿಯನ್ನು ಒದಗಿಸುವ ಕೃತಿಯನ್ನು ರಚಿಸಿರುವುದು ಖುಷಿಯ ವಿಚಾರ' ಎಂದರು.

`ಅಂದಿನ ಕಾಲಕ್ಕೆ ಸಾಮಾಜಿಕ ವಿಚಾರಗಳ ಬಗ್ಗೆ ಬೌದ್ಧಿಕ ಚರ್ಚೆ ಏರ್ಪಡಿಸುವಲ್ಲಿ ಅನಂತಮೂರ್ತಿ ಅವರು ನಿಸ್ಸೀಮರು. ಅದನ್ನು ಇಂದಿಗೂ ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ನನಗೆ ಪಾಠ ಮಾಡಿ ಗುರುವಾಗಿದ್ದರು. ಪಠ್ಯದಲ್ಲಿ ಬೆಸೆದುಕೊಂಡ ವಿಚಾರಗಳನ್ನು ಬಹಳ ಸೂಕ್ಷ್ಮವಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು' ಎಂದು ನೆನಪಿಸಿಕೊಂಡರು.

ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ನನಗೆ ಅತ್ಯಂತ ಪ್ರಿಯವಾದದ್ದು ಮೇಷ್ಟ್ರ ಕೆಲಸ. ನನ್ನ ಎಲ್ಲ ಚಿಂತನೆಗಳು ಕೂಡ ಬೋಧನೆಯಿಂದಲೇ ಹುಟ್ಟಿಕೊಂಡವು. ನನಗೊಬ್ಬ ಮೇಷ್ಟ್ರಿದ್ದರು, ಅವರಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಯು ಸಿಗಲಿಲ್ಲ, ಕೊನೆವರೆಗೂ ಅವರು ಸಾಧಾರಣ ಬೋಧಕ ಹುದ್ದೆಯಲ್ಲಿಯೇ ಇದ್ದರು. ಆದರೆ `ಮೇಷ್ಟ್ರಾಗಿ ನಾನು ಅನುಭವಿಸಿದ ಸಂತೋಷಕ್ಕೆ ನಾನೇ ಹಣ ನೀಡಬೇಕು' ಎಂದು  ಹೇಳುತ್ತಿದ್ದರು. ಒಬ್ಬ ಉತ್ತಮ ಮೇಷ್ಟ್ರು ಮಾತ್ರ ಹೀಗೆ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯ' ಎಂದು ತಿಳಿಸಿದರು.

ಮಾಲಿಕೆ ಸಂಪಾದಕ ಎನ್.ಎ.ಎಂ.ಇಸ್ಮಾಯಿಲ್, `ಪ್ರಜಾವಾಣಿ'ಯ ಮುಖ್ಯ ಉಪಸಂಪಾದಕ ರಘುನಾಥ ಚ.ಹ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.