ದೊಡ್ಡಬಳ್ಳಾಪುರ: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ಸ್ ಫ್ಯಾಷನ್ ಲಿ, (ಪ್ರೊಸೆಸಿಂಗ್ ಘಟಕ)ಕ್ಕೆ ಸೋಮವಾರ ಬೆಳಗ್ಗೆ ಏಕಾಏಕಿ ಬೀಗ ಹಾಕಲಾಗಿದೆ. ಇದರಿಂದ ಕಂಗಾಲಾದ ಕಾರ್ಮಿಕರು ಕಾರ್ಖಾನೆಯ ಕ್ರಮ ಖಂಡಿಸಿ ಕಾರ್ಖಾನೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ಕಂಪೆನಿಯವರು ಕಾರ್ಖಾನೆ ಗೇಟ್‌ನ ಸೂಚನಾ ಫಲಕದಲ್ಲಿನ ಪತ್ರದಲ್ಲಿ ಬೀಗ ಹಾಕಲು ಏನು ಕಾರಣ ಎಂಬುದನ್ನು ವಿವರಿಸಿದೆ.
‘ಸ್ಪರ್ಧಾತ್ಮಕ ಯುಗದಲ್ಲಿ ಬೇಡಿಕೆ ಕುಸಿತವಾಗಿರುವುದು, ಕಾರ್ಮಿಕರ ಅಸಹಕಾರ, ಯಂತ್ರಗಳನ್ನು ಹಾನಿಮಾಡಿರುವುದು, ಕಾರ್ಮಿಕರ ಬೋನಸ್ ಬೇಡಿಕೆ ಹಾಗೂ ಕಂಪೆನಿಯ ಜೊತೆ ಅಸಹಕಾರಗಳಿಂದ ಕಂಪೆನಿ ನಷ್ಟಕ್ಕೊಳಗಾಗಿ, ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ವಸ್ತುಗಳನ್ನು ನೀಡಲು ಕಂಪೆನಿಗೆ ಸಾಧ್ಯವಾಗಿಲ್ಲ.
ಈ ಬಗ್ಗೆ ಕಂಪೆನಿ ಅನಿವಾರ್ಯವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಕಂಪೆನಿಯ ಯಂತ್ರೋಪಕರಣ ಹಾಗೂ ಕಾರ್ಖಾನೆಯ ಹಿತ ಕಾಪಾಡುವ ದಿಸೆಯಲ್ಲಿ ಮಾ.೧೭ರಂದು ಬೆಳಗಿನಿಂದ ಕಾರ್ಖಾನೆಗೆ ಬೀಗ ಮುದ್ರೆ ಹಾಕಲಾಗಿದೆ’ ಎಂದು ಇ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿಭಟನಾನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಬಾಂಬೆ ರೇಯಾನ್ಸ್ ಫ್ಯಾಷನ್ ಲಿ.ನ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಬೀಗ ಮುದ್ರೆ ಹಾಕಲು ಕಾರ್ಖಾನೆ ನೀಡಿರುವ ಕಾರಣಗಳು ಸತ್ಯಕ್ಕೆ ದೂರವಾಗಿವೆ ಎಂದು ಆರೋಪಿಸಿದರು.
ಹಗಲು ರಾತ್ರಿ ಶ್ರಮಪಟ್ಟು ದುಡಿಯುವ ಕಾರ್ಮಿಕರು ನ್ಯಾಯಬದ್ಧವಾಗಿ ತಮಗೆ ಸಿಗಬೇಕಾದ ವೇತನವನ್ನು ಕೇಳಿರುವುದಕ್ಕಾಗಿ ಕಾನೂನು ಬಾಹಿರವಾಗಿ ಬೀಗಮುದ್ರೆ ಹಾಕಲಾಗಿದೆ. ಕಳೆದ ಒಂದು ವರ್ಷಗಳಿಂದ ಕಾರ್ಖಾನೆ ಆಡಳಿತ ಮಂಡಲಿ ಹಾಗೂ ಕಾರ್ಮಿಕರ ನಡುವೆ ಈ ವೇತನ ಹೆಚ್ಚಳದ ಕುರಿತಾಗಿ ಸಂಧಾನ ನಡೆಯುತ್ತಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಸಹ ದಾಖಲಾಗಿದೆ. ೨೦೧2–-೧೩ರಲ್ಲಿ ಕಾರ್ಮಿಕರಿಗೆ ಕಡಿಮೆ ವೇತನ ನೀಡಿದ್ದರಿಂದ ಕಾರ್ಖಾನೆಯ ವಿರುದ್ದ ೭೬ ಲಕ್ಷ ರೂಗಳ ಕ್ಲೇಮ್ ದಾಖಲಾಗಿದೆ.
ಕಾರ್ಖಾನೆ ಯಾವುದೇ ಕಾರಣದಿಂಲೂ ನಷ್ಟ ಅನುಭವಿಸಿಲ್ಲ. ಯುಗಾದಿ ಹಬ್ಬಕ್ಕೆ ಮುಂಗಡ ನೀಡುವುದಾಗಿ ಹೇಳಿರುವ ಕಂಪೆನಿ ವೇತನ ಏರಿಕೆ ಕುರಿತಂತೆ ಯಾವೊಂದು ತೀರ್ಮಾನ ಕೈಗೊಳ್ಳದೇ ರಾತ್ರೋರಾತ್ರಿ ಬೀಗ ಜಡಿದು, ಕಾರ್ಖಾನೆಯ ೫೨೦ ಕಾರ್ಮಿಕರನ್ನು ಬೀದಿಪಾಲು ಮಾಡಿದೆ. ಇದು ಪರೋಕ್ಷವಾಗಿ ಇತರ ಘಟಕಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಾರ್ಖಾನೆಯ ಈ ಕ್ರಮ ಖಂಡನೀಯ. ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬಾಂಬೆ ರೇಯಾನ್ಸ್ ಫ್ಯಾಷನ್ ಲಿ.ನ ಕಾರ್ಮಿಕ ಘಟಕದ ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಪಾಪೇಗೌಡ ಹಾಗೂ ಮುಖಂಡರಾದ ಮಂಜುನಾಥ್ ರುದ್ರೇಶ್ ಸೇರಿ ನೂರಾರು ಕಾರ್ಮಿಕರು ಈ ವೇಳೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.