ADVERTISEMENT

ಕಟ್ಟಡದಿಂದ ಜಿಗಿದು ತಾಯಿ, ಮಗು ಸಾವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST

ನೆಲಮಂಗಲ: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಅಪಾರ್ಟ್‌ಮೆಂಟ್‌ನಿಂದ ಕೆಳಗೆ ತಳ್ಳಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ತಾಯಿ ಮತ್ತು ಮಗುವೊಂದು ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಶ್ಯಾಮಸುಂದರ್ ಎಂಬುವರ ಪತ್ನಿ ಅನುರಾಧ (25) ಮತ್ತು ಮಗಳು ಭಾವನಾ (5) ಮೃತಪಟ್ಟವರು. ಅವರ ಒಂದು ವರ್ಷದ ಮಗು ವಿಶ್ವನಾಥ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನಾದ ಶ್ಯಾಮಸುಂದರ್ ಎರಡು ಮದುವೆಯಾಗಿದ್ದ. ಆತನ ಪತ್ನಿಯರಾದ ಕುಮಾರಿ ಮತ್ತು ಅನುರಾಧ ಅವರಿಗೆ ತಲಾ ಇಬ್ಬರು ಮಕ್ಕಳು. ಎಲ್ಲರೂ ಒಂದೇ ಮನೆಯಲ್ಲಿ ವಾಸವಿದ್ದರು.

ಇದರಿಂದಾಗಿ ಕುಮಾರಿ, ಅನುರಾಧ ಹಾಗೂ ಶ್ಯಾಮಸುಂದರ್ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಸೋಮವಾರ ರಾತ್ರಿಯೂ ಅವರ ನಡುವೆ ಜಗಳವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

 ಇದರಿಂದ ಬೇಸರಗೊಂಡ ಅನುರಾಧ, ಮಕ್ಕಳಾದ ಭಾವನಾ ಮತ್ತು ವಿಶ್ವನಾಥ್‌ನನ್ನು ಬೆಳಗಿನ ಜಾವ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ತಳ್ಳಿ ನಂತರ ಅವರೂ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟರು.

 ಮಗು ವಿಶ್ವನಾಥ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಅನುರಾಧ ವಿರುದ್ಧ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ಯಾಮಸುಂದರ್ ಹಾಗೂ ಕುಮಾರಿ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಬಗ್ಗೆ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.