ADVERTISEMENT

ಕಟ್ಟಾ ವಿರುದ್ಧದ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:47 IST
Last Updated 10 ಮೇ 2018, 19:47 IST
ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಕಟ್ಟಾ ಸುಬ್ರಹ್ಮಣ್ಯ ನಾಯ್ಡು   

ಬೆಂಗಳೂರು: ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಐಡಿಬಿ) ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸುವಲ್ಲಿ ನಡೆಯಿತೆನ್ನಲಾದ ಅಕ್ರಮ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕಟ್ಟಾ ಜಗದೀಶ್‌ ಸಾಕ್ಷಿಯೊಬ್ಬರಿಗೆ ಲಂಚದ ಆಮಿಷ ಒಡ್ಡಿದ್ದರು ಎಂಬ ಆರೋಪವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ರದ್ದುಪಡಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ದಾಖಲಿಸಿದ್ದ ಪ್ರಕರಣಗಳನ್ನು ಕೈಬಿಟ್ಟಿದೆ.

ಈ ಆರೋಪವನ್ನು ರುಜುವಾತುಪಡಿಸುವ ಸಾಕ್ಷ್ಯಾಧಾರಗಳು ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ, ಉಳಿದ ಕ್ರಿಮಿನಲ್‌ ಆರೋಪಗಳ ವಿಚಾರಣೆಯನ್ನು ಸಿಎಂಎಂ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಮೇ 29ರಂದು ಆ ನ್ಯಾಯಾಲಯದ ಮುಂದೆ ಹಾಜರಾಗಲು ಜಗದೀಶ್‌ ಅವರಿಗೆ ಸೂಚಿಸಿದೆ.

ADVERTISEMENT

ಜಮೀನು ಪರಿಹಾರ ವಿತರಣೆಯಲ್ಲಿ ನಡೆದಿತೆನ್ನಲಾದ ಅಕ್ರಮ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. 2010ರಲ್ಲಿ ಬಿಬಿಎಂ‍ಪಿ ಸದಸ್ಯರಾಗಿದ್ದ ಕಟ್ಟಾ ಜಗದೀಶ್‌, ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ರಾಮಾಂಜನಪ್ಪ ಎಂಬುವರಿಗೆ ಸಾಕ್ಷ್ಯ ಹೇಳದಂತೆ ಒತ್ತಡ ಹೇರಿದ್ದರು. ಇದಕ್ಕೆ ಪ್ರತಿಯಾಗಿ ಒಂದು‌ ಲಕ್ಷ ಹಣ ಪಡೆಯುವಂತೆ ಅಗ್ರಹಿಸಿದ್ದರು. ಅಲ್ಲದೆ, ತಮ್ಮ ಸದಾಶಿವನಗರದ ಮನೆಯಲ್ಲಿದ್ದ ಕುಮಾರ್‌ ಎಂಬುವರಿಗೆ ಫೋನ್‌ ಮಾಡಿ, ರಾಮಾಂಜನಪ್ಪ ಅವರಿಗೆ ಹಣ ನೀಡುವಂತೆ ತಿಳಿಸಿದ್ದರು.

ಕುಮಾರ್‌ ಲಂಚ ಕೊಡುವಾಗ ಲೋಕಾಯುಕ್ತ ಪೊಲೀಸರು ಬಲೆ ಬೀಸಿದರು. ಅವರು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಆನಂತರ ಜಗದೀಶ್‌ ಅವರನ್ನು ಬಂಧಿಸಲಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.