ADVERTISEMENT

ಕಡಿಮೆ ಅಂಕ: ಟಿ.ಸಿ ಪಡೆಯಲು ಒತ್ತಡ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 20:32 IST
Last Updated 10 ಏಪ್ರಿಲ್ 2013, 20:32 IST

ಬೆಂಗಳೂರು: ನಗರದ ಸೇಂಟ್ ಜಾನ್ಸ್ ರಸ್ತೆಯ ಚಿನ್ಮಯ ಶಾಲೆಯಲ್ಲಿ ಕಡಿಮೆ ಅಂಕ  ಗಳಿಸಿದ ಕಾರಣಕ್ಕೆ ವರ್ಗಾವಣೆ ಪತ್ರ (ಟಿಸಿ) ತೆಗೆದುಕೊಳ್ಳುವಂತೆ 10 ವಿದ್ಯಾರ್ಥಿಗಳಿಗೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಲಾಗಿದೆ.

`9ನೇ ತರಗತಿಯಲ್ಲಿ 10 ವಿದ್ಯಾರ್ಥಿಗಳು ಕನಿಷ್ಠ ಅಂಕ ಗಳಿಸಿದ್ದು, ಈ ಕಾರಣಕ್ಕೆ ಶಾಲಾ ಆಡಳಿತ ಮಂಡಳಿ ವರ್ಗಾವಣೆ ಪತ್ರ ತೆಗೆದುಕೊಳ್ಳುವಂತೆ ಮಕ್ಕಳ ಪೋಷಕರಿಗೆ ಸೂಚಿಸಿದೆ. ಬುಧವಾರ ಮಧ್ಯಾಹ್ನ 2 ಗಂಟೆಯೊಳಗೆ ಟಿಸಿ ತೆಗೆದುಕೊಳ್ಳಬೇಕು ಎಂಬ ಗಡುವನ್ನೂ ವಿಧಿಸಿದೆ' ಎಂದು ಪೋಷಕರು ದೂರಿದ್ದಾರೆ. ಈ ಸಂಬಂಧ ಆರ್‌ಟಿಇ ಕಾರ್ಯಪಡೆಗೆ ಪೋಷಕರು ಕರೆ ಮಾಡಿ ಅಳಲು ತೋಡಿಕೊಂಡಿದ್ದರು.

ಬಳಿಕ ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ.ರಾವ್ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗವು ದೂರು ದಾಖಲಿಸಿಕೊಂಡಿದೆ. ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಬೆಂಗಳೂರು ಉತ್ತರ ವಲಯ-3ರ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಆಯೋಗದ ಸಹಾಯಕ ನಿರ್ದೇಶಕರು ಸೂಚಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿನ್ಮಯ ಶಾಲೆಯ ಮುಖ್ಯ ಶಿಕ್ಷಕರು, `ವರ್ಗಾವಣೆ ಪತ್ರ ಪಡೆಯುವಂತೆ ಯಾವ ವಿದ್ಯಾರ್ಥಿಯ ಮೇಲೂ ಒತ್ತಡ ಹೇರಿಲ್ಲ' ಎಂದಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಪ್ರತಿಕ್ರಿಯಿಸಿ, `ಆಯೋಗದ ಸೂಚನೆಯ ಮೇರೆಗೆ ಆರಂಭಿಕ ತನಿಖೆ ನಡೆಸಲಾಗಿದೆ. ಶಾಲಾ ಮುಖ್ಯ ಶಿಕ್ಷಕರು ಅಂತಹ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆ ಬಗ್ಗೆ ಯಾವುದೇ ಪೋಷಕರು ಇಲಾಖೆಗೆ ದೂರು ಸಲ್ಲಿಸಿಲ್ಲ. ಪೋಷಕರು ಮಾಹಿತಿ ನೀಡಿದರೆ ಹೆಚ್ಚಿನ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.