ADVERTISEMENT

ಕಡಿಮೆ ಸಮಯದಲ್ಲಿ ಹೆಚ್ಚು ಮನೆಗಳ ನಿರ್ಮಾಣ

ಆಲೂರಿನಲ್ಲಿ ನ್ಯೂಜಿಲೆಂಡ್‌ ತಂತ್ರಜ್ಞಾನದ ಬಿಡಿಎ ಫ್ಲ್ಯಾಟ್‌ಗಳು

ದಯಾನಂದ ಎಚ್‌.ಎಚ್‌.
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ಬೆಂಗಳೂರು: ಮನೆ ನಿರ್ಮಾಣಕ್ಕೆ ವರ್ಷಗಟ್ಟಲೆ ಸಮಯ ಹಿಡಿಯುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನದಿಂದ ದಿನಕ್ಕೆ ನಾಲ್ಕೈದು ಮನೆಗಳನ್ನು ನಿರ್ಮಿಸಲು ಸಾಧ್ಯ.

ನಗರದ ತುಮಕೂರು ರಸ್ತೆ ಮಾಕಳಿ ಸಮೀಪದ ಆಲೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಫ್ಲ್ಯಾಟ್‌ಗಳನ್ನು ನ್ಯೂಜಿಲೆಂಡ್‌ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ಸದ್ಯ ದಿನಕ್ಕೆ ನಾಲ್ಕು ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದವರಿಗಾಗಿ ಒಂದು ಕೊಠಡಿಯ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಮುಂದಾಗಿರುವ ಬಿಡಿಎ ಕಾಮಗಾರಿಯ ಗುತ್ತಿಗೆಯನ್ನು ಗೌರಿ ಇನ್ಫ್ರಾ ಎಂಜಿನಿಯರ್ಸ್‌ ಲಿಮಿಟೆಡ್‌, ಎಸ್‌ಪಿಎಂಎಲ್‌ ಮತ್ತು ಪಿ.ಜಿ.ಶೆಟ್ಟಿ ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ ಕಂಪೆನಿಗಳಿಗೆ ನೀಡಿದೆ. ಈ ಕಾಮಗಾರಿಯ ಒಟ್ಟು ವೆಚ್ಚ ₨110 ಕೋಟಿ. ದಾಸನಪುರ ಹೋಬಳಿಯ ಆಲೂರಿನ 14.8 ಎಕರೆ ಪ್ರದೇಶದಲ್ಲಿ ಒಟ್ಟು 1,520 ಫ್ಲ್ಯಾಟ್‌ಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ.

ಶೇರ್‌ವಾಲ್‌ ತಂತ್ರಜ್ಞಾನ: ನ್ಯೂಜಿಲೆಂಡ್‌ನ ಮೂರ್‌ಲಿವಿಂಗ್‌ ಕಂಪೆನಿಯ ಸಹಯೋಗದೊಂದಿಗೆ ಶೇರ್‌ವಾಲ್‌ ತಂತ್ರಜ್ಞಾನ ಬಳಸಿ ಇಲ್ಲಿನ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೊದಲೇ ಮನೆಯನ್ನು ನಿರ್ಮಿಸಿ ಆ ನಂತರ ಅದನ್ನು ಮಹಡಿಗಳಾಗಿ ಜೋಡಿಸುವ ತಂತ್ರಜ್ಞಾನ ಇದಾಗಿದೆ. ಕಾಂಕ್ರಿಟ್‌ನಿಂದ ನಿರ್ಮಿಸಿದ 5 ಇಂಚು ದಪ್ಪದ ಗೋಡೆಗಳನ್ನು ಜೋಡಿಸಿ, ಕಬ್ಬಿಣದ ಕಿಟಕಿ ಬಾಗಿಲುಗಳುಳ್ಳ ಮನೆಯನ್ನು ಮೊದಲೇ ನಿರ್ಮಿಸಲಾಗುತ್ತದೆ.

ಮನೆಗೆ ವೈರಿಂಗ್‌, ನೀರಿನ ಸಂಪರ್ಕ,  ಶೌಚಾಲಯ ವ್ಯವಸ್ಥೆ, ಅಡುಗೆ ಮನೆ ಎಲ್ಲವೂ ಮೊದಲೆ ಸಿದ್ಧಗೊಳ್ಳುತ್ತದೆ. ಮನೆಗೆ ಪೇಂಟಿಂಗ್‌ ಕೂಡಾ ಮೊದಲೇ ಮಾಡಲಾಗುತ್ತದೆ. ಸಿದ್ಧಗೊಂಡ ಮನೆಯನ್ನು ಈ ಮೊದಲೇ ನಿರ್ಮಿಸಿಕೊಂಡಿರುವ ಅಡಿಪಾಯದ ಮೇಲೆ ಕ್ರೇನ್‌ ಸಹಾಯದಿಂದ ಜೋಡಿಸಲಾಗುತ್ತದೆ.

‘ಪ್ರತಿ ಮನೆಯ ಗೋಡೆಗಳ ಮೂಲೆಗಳಲ್ಲಿರುವ ಕಬ್ಬಿಣದ ಆಧಾರ ಸರಳನ್ನು ವೆಲ್ಡ್‌ ಮಾಡಿ ಮೇಲಿನ ಮಹಡಿಗಳನ್ನು ಜೋಡಿಸಬಹುದಾಗಿದೆ. ಆಲೂರಿನಲ್ಲಿ ಸದ್ಯ ಮೂರು ಮಹಡಿಗಳ ಫ್ಲಾಟ್‌ಗಳು ಸಿದ್ಧಗೊಳುತ್ತಿವೆ. ಒಂದು ಯುನಿಟ್‌ನಲ್ಲಿ ನಾಲ್ಕು ಚದರದ (453 ಚದರ ಅಡಿ) ಎಂಟು ಮನೆಗಳಿವೆ’ ಎಂದು ಗೌರಿ ಇನ್ಫ್ರಾ ಎಂಜಿನಿಯರ್ಸ್‌ ಲಿಮಿಟೆಡ್‌ ಅಧ್ಯಕ್ಷ ಸಿ.ಪಿ.ಉಮೇಶ್‌ ಹೇಳಿದರು.

ಫ್ಲ್ಯಾಟ್‌ಗಳನ್ನು ಆಧುನಿಕ ತಂತ್ರಜ್ಞಾನದ ಜತೆಗೆ ಉತ್ಕೃಷ್ಟ ಗುಣಮಟ್ಟದ ಕಟ್ಟಡ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಈ ಮನೆಗಳ ನಿರ್ಮಾಣಕ್ಕೆ ಎಂ.30 ಗುಣಮಟ್ಟದ ಕಾಂಕ್ರಿಟ್‌ ಬಳಸಲಾಗುತ್ತಿದೆ.  ಸೇತುವೆ ನಿರ್ಮಿಸಲು ಈ ಗುಣಮಟ್ಟದ ಕಾಂಕ್ರಿಟ್‌ ಬಳಸುತ್ತಾರೆ. ಮಹಡಿಗಳನ್ನು ಬೆಸೆಯಲು 6 ಎಂ.ಎಂ ದಪ್ಪ, 5 ಇಂಚು ಅಗಲದ ಕಬ್ಬಿಣದ ಚೌಕವನ್ನು ಆಧಾರವಾಗಿ ಜೋಡಿಸಲಾಗುತ್ತಿದೆ.

ಫ್ಲ್ಯಾಟ್‌ಗಳ ನೆಲಕ್ಕೆ ಗುಣಮಟ್ಟದ ಟೈಲ್ಸ್‌, ಅಡುಗೆಮನೆ, ಸ್ನಾನದ ಮನೆ ಹಾಗೂ ಶೌಚಾಲಯದ ಗೋಡೆಗಳಿಗೆ ಹೊಸ ವಿನ್ಯಾಸದ ಟೈಲ್ಸ್‌ ಹಾಕಲಾಗುತ್ತಿದೆ. ಈ ಮನೆಗಳು ಭೂಕಂಪವನ್ನು ಸಹಿಸುವ ಸಾಮರ್ಥ್ಯ ಹೊಂದಿವೆ. ಒಂದೇ ಅಡಿಪಾಯದ ಮೇಲೆ ಸುಮಾರು 10 ಮಹಡಿವರೆಗೆ ಈ ಮನೆಗಳನ್ನು ಜೋಡಿಸಬಹುದಾಗಿದೆ. ಇತರೆ ಅಪಾರ್ಟ್‌ಮೆಂಟ್‌ಗಳಿಗಿಂತ ಮೂರು ಪಟ್ಟು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ ಎನ್ನುತ್ತಾರೆ ಉಮೇಶ್‌.

ಘಟಕದಲ್ಲಿ ಮನೆಗಳ ತಯಾರಿ: ಫ್ಲ್ಯಾಟ್‌ಗಳ ಸಮೀಪವೇ ಇರುವ ನಿರ್ಮಾಣ ಘಟಕದಲ್ಲಿ ಮನೆಗಳ ತಯಾರಿ ನಡೆಯುತ್ತಿದೆ. ಸುಮಾರು ₨ 20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಘಟಕದಲ್ಲಿ ಫ್ಲ್ಯಾಟ್‌ಗಳ ಗೋಡೆಗಳ ನಿರ್ಮಾಣ, ಜೋಡಣೆಯ ಕಾರ್ಯ ನಡೆಯುತ್ತದೆ. ಇಲ್ಲಿ ನಿರ್ಮಾಣಗೊಂಡ ಮನೆಗಳನ್ನು ಲಾರಿಯ ಮೇಲೆ ತೆಗೆದುಕೊಂಡು ಹೋಗಿ ಕ್ರೇನ್‌ ಸಹಾಯದಿಂದ ಜೋಡಿಸಲಾಗುತ್ತದೆ.

ಕಬ್ಬಿಣದ ಸರಳುಗಳು, ಬಾಗಿಲು, ಕಿಟಕಿಗಳನ್ನು ಜೋಡಿಸಿಕೊಂಡ ಬ್ಲಾಕ್‌ಗಳಿಗೆ ಕಾಂಕ್ರಿಟ್‌ ತುಂಬಲಾಗುತ್ತದೆ. ಕಾಂಕ್ರಿಟ್‌ ಹಾಕಿದ 8 ಗಂಟೆಗಳ ಬಳಿಕ ಬ್ಲಾಕ್‌ಗಳಿಂದ ಗೋಡೆಗಳನ್ನು ಬೇರ್ಪಡಿಸಿ, ನಾಲ್ಕು ನಾಲ್ಕು ಗೋಡೆಗಳನ್ನು ಜೋಡಿಸಲಾಗುತ್ತದೆ. ನಂತರ ಕೆಳಭಾಗಕ್ಕೆ ಗೋಡೆಯ ಬ್ಲಾಕ್‌ ಮಾದರಿಯಲ್ಲೇ ಕಾಂಕ್ರಿಟ್‌ ಹಾಕಿ ಮನೆಗಳನ್ನು ನಿರ್ಮಿಸಲಾಗುತ್ತದೆ.

ಸದ್ಯ ಆಲೂರಿನಲ್ಲಿ ಒಂದು ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇನ್ನೂ ಎರಡು ಘಟಕಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಆನಂತರ ದಿನಕ್ಕೆ 12 ಮನೆಗಳನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂಬುದು ಉಮೇಶ್‌ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.