ಬೆಂಗಳೂರು: `ಸದಾ ನೋವಿರುವವರ ಜೊತೆ ಕೆಲಸ ಮಾಡುವ ವೈದ್ಯರು, ಅವರ ನೋವು ನಿವಾರಣೆಗಾಗಿಯೇ ದುಡಿಯುತ್ತಾರೆ. ನೊಂದವರ ಕಣ್ಣೀರು ಒರೆಸುವುದಕ್ಕಿಂತ ದೊಡ್ಡ ಪೂಜೆ ಯಾವುದೂ ಇಲ್ಲ~ ಎಂದು ಹಾಸ್ಯ ನಿರೂಪಕ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎಂ.ಎಸ್.ರಾಮಯ್ಯ ಆಸ್ಪತ್ರೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಸಂಬಳ ಪಡೆದು ಕೆಲಸ ಮಾಡಿದರೆ ಅದು ಕರ್ತವ್ಯ ಎನಿಸುತ್ತದೆಯೇ ಹೊರತು ಸೇವೆ ಅಲ್ಲ~ ಎಂದ ಅವರು, `ಪ್ರತಿಯೊಂದು ವೃತ್ತಿಯೂ ಪವಿತ್ರವೇ ಆಗಿದ್ದು, ಬೇರೆ ವೃತ್ತಿ ಬಾಂಧವರನ್ನು ಗೌರವದಿಂದ ಕಾಣುವ ಪರಿಪಾಠ ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.
`ಗೋಕುಲ ಶಿಕ್ಷಣ ಪ್ರತಿಷ್ಠಾನ ರಾಜ್ಯದಲ್ಲೇ ಉತ್ಕೃಷ್ಟವಾದ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಯೋಜನೆ ಹೊಂದಿದೆ~ ಎಂದು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಡಾ.ಡಿ.ವಿ ಗುರುಪ್ರಸಾದ್ ಹೇಳಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಆರ್. ಜಯರಾಂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ಕೃಷ್ಣೇಗೌಡ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.