ADVERTISEMENT

ಕನಿಷ್ಠ ಕೂಲಿಗೆ ಆಗ್ರಹಿಸಿ ಮುಷ್ಕರ

ಹೆಸರಘಟ್ಟ ತೋಟಗಾರಿಕಾ ಸಂಶೋಧನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಯಲಹಂಕ: ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ದಿನಗೂಲಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನೂ ನೀಡುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರು ಸಂಶೋಧನಾ ಕೇಂದ್ರದ ಮುಂಭಾಗದಲ್ಲಿ ಬುಧವಾರ ಮುಷ್ಕರ ಆರಂಭಿಸಿದರು. 

ದಿನಗೂಲಿ ನೌಕರ ಮಂಜುನಾಥ್ ಮಾತನಾಡಿ, `ಕೇಂದ್ರದಲ್ಲಿ 350ಕ್ಕೂ ಅಧಿಕ ಕಾರ್ಮಿಕರು ಹಲವು ವರ್ಷಗಳಿಂದ ವಿಜ್ಞಾನಿಗಳ ಜೊತೆಯಲ್ಲಿ ಕೃಷಿ ಸಂಶೋಧನೆಗೆ ಪೂರಕವಾದ ಉಳುಮೆ, ಅಗೆಯುವುದು, ಕಳೆ ಕೀಳುವುದು ಹಾಗೂ ಔಷಧಿ ಸಿಂಪಡಿಸುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ದಿನಕ್ಕೆ ರೂ145 ಕೂಲಿ ನೀಡುತ್ತಿದ್ದಾರೆ. 25 ವರ್ಷಗಳಿಂದಲೂ ಕಾರ್ಮಿಕರಿಗೆ ಕನಿಷ್ಠ ದಿನಗೂಲಿ ಹಾಗೂ ಭವಿಷ್ಯನಿಧಿ (ಪಿಎಫ್) ನೀಡುತ್ತಿಲ್ಲ' ಎಂದು ದೂರಿದರು.

`ಕನಿಷ್ಠ ಕೂಲಿಯನ್ನು ನೀಡುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, `ನಾವು ಗುತ್ತಿಗೆ ನೀಡಿದ್ದು, ಗುತ್ತಿಗೆದಾರರನ್ನೇ ಕೇಳಿ' ಎಂದು ಹೇಳುತ್ತಾರೆ. ಈ ಬಗ್ಗೆ ಕೇಂದ್ರೀಯ ಕಾರ್ಮಿಕ ಆಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕನಿಷ್ಠ ದಿನಗೂಲಿ ಹಾಗೂ ಭವಿಷ್ಯನಿಧಿ ನೀಡುವ ತನಕ ಕೆಲಸಕ್ಕೆ ಹಾಜರಾಗುವುದಿಲ್ಲ' ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.