
ಬೆಂಗಳೂರು: ‘ಸಂಸ್ಕೃತದಲ್ಲಿ ಶಾಸ್ತ್ರಗ್ರಂಥಗಳು ಸಾವಿರಾರು ಇವೆ. ನಾಡಿನಲ್ಲಿರುವ ಸಂಸ್ಕೃತ ವಿದ್ವಾಂಸರು ಈ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕು. ಆಗ ಕನ್ನಡ ಭಾಷೆಯ ಬಿಗಿ ಹಾಗೂ ವ್ಯಾಪ್ತಿ ಹೆಚ್ಚಾಗುತ್ತದೆ’ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಸಲಹೆ ನೀಡಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾ ಲಯದಲ್ಲಿ ಶನಿವಾರ ನಡೆದ ಸಂಸ್ಕೃತ ಪುಸ್ತಕಗಳ ಬಿಡುಗಡೆ ಹಾಗೂ ಸಂಸ್ಕೃತ ಸಂಜೆ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಒಬ್ಬೊಬ್ಬ ವಿದ್ವಾಂಸ ಒಂದೊಂದು ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಸಾಕು. 10 ವರ್ಷಗಳಲ್ಲಿ 10 ಸಾವಿರ ಪುಸ್ತಕಗಳು ಕನ್ನಡಕ್ಕೆ ಸೇರ್ಪಡೆಯಾಗು ತ್ತವೆ. ಜೊತೆಗೆ ಸಂಸ್ಕೃತದ ಸಾರವನ್ನು ಕನ್ನಡಿಗರಿಗೆ ತಿಳಿಸಲು ಸಾಧ್ಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.
‘ದೇಶದಲ್ಲಿ ಎರಡು ಶತಮಾನಗಳ ಕಾಲ ಸಂಸ್ಕೃತಕ್ಕೆ ದುರವಸ್ಥೆ ಬಂದಿತ್ತು. ಮೆಕಾಲೆ ಮಹಾಶಯ ಜಾರಿಗೆ ತಂದ ಶಿಕ್ಷಣ ನೀತಿಯಿಂದ ಇಂಗ್ಲಿಷ್ ಭಾಷೆಗೆ ಮೊದಲ ಪ್ರಾಧಾನ್ಯ ದೊರಕಿತು. ಬಳಿಕ ಮೆಕಾಲೆ ತನ್ನ ತಂದೆಗೆ ‘ಭಾರತೀಯರು ಈ ಮೂಲಕ ಇಂಗ್ಲೆಂಡಿನ ಶಾಶ್ವತ ಸೇವಕರಾಗಿ ಉಳಿಯುತ್ತಾರೆ’ ಎಂದು ಪತ್ರ ಬರೆದಿದ್ದ. ಆ ಮಾತು ಸತ್ಯವಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷೆ ಬಗ್ಗೆ ಯುವಕರಲ್ಲಿ ಒಲವು ಹೆಚ್ಚುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯಪಾಲ ಎಚ್.ಆರ್. ಭಾರ ದ್ವಾಜ್ ಪುಸ್ತಕ ಬಿಡುಗಡೆ ಮಾಡಿ, ‘ಜಗತ್ತಿನ ಅತೀ ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತವೂ ಸೇರಿದೆ. ವಿದೇಶಿಯರಿಗೂ ಹೆಚ್ಚಿನ ಸಂಸ್ಕೃತ ಪ್ರೀತಿ ಇದೆ’ ಎಂದರು.
‘ಕನ್ನಡ ಭಾಷೆಯ ಮೇಲೆ ಸಂಸ್ಕೃತ ಭಾಷೆಯ ಪ್ರಭಾವ ಇದೆ. ಕನ್ನಡದಲ್ಲಿ ಶೇ 60ರಷ್ಟು ಸಂಸ್ಕೃತ ಪದಗಳು, ತೆಲುಗುವಿನಲ್ಲೂ ಶೇ 60 ಸಂಸ್ಕೃತ ಪದಗಳು ಸೇರಿವೆ. ಪರಸ್ಪರ ಪೂರಕವಾಗಿ ಎರಡೂ ಭಾಷೆ ಬೆಳೆಯಬೇಕು’ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಸಂಜೆ ಕಾಲೇಜು ಉದ್ಘಾಟಿಸಿ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕೃತವು ಇಂಗ್ಲಿಷ್ ಸರಿಸಮನಾದ ಭಾಷೆ. ಜನರಲ್ಲಿ ನೈತಿಕ ಮಟ್ಟ ಹೆಚ್ಚಿಸಲು ಸಂಸ್ಕೃತ ಭಾಷೆಯ ಪುನರುಜ್ಜೀವನ ಆಗಬೇಕು’ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ‘ವಿ.ವಿ.ಗೆ ಶೀಘ್ರದಲ್ಲೇ 100 ಎಕರೆ ಜಮೀನು ದೊರಕಲಿದೆ. ಆಗ ಇನ್ನಷ್ಟು ವೇಗವಾಗಿ ಸಂಸ್ಕೃತ ಕಲಿಕಾ ಚಟುವಟಿಕೆಗಳನ್ನು ನಡೆಸಬಹುದು’ ಎಂದರು.
‘ಉದ್ಯೋಗಿಗಳು, ಉದ್ಯಮಿಗಳು, ಗೃಹಿಣಿಯರು, ನಿವೃತ್ತರಲ್ಲಿ ಸಂಸ್ಕೃತ ಅಧ್ಯಯನ ಆಸಕ್ತಿ ಹೆಚ್ಚಿಸಲು ಸಂಜೆ ಕಾಲೇಜು ಆರಂಭಿಸಲಾಗಿದೆ. ನಗರ ಕೇಂದ್ರದಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಎ. ತರಗತಿಗೆ 50ಕ್ಕೂ ಅಧಿಕ ಮಂದಿ ಪ್ರವೇಶ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.