ADVERTISEMENT

ಕನ್ನಡ ಬಾವುಟ ಹಾರಿಸುವಂತಿಲ್ಲ - ಶೀಘ್ರವೇ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಬೆಂಗಳೂರು: ಇನ್ನು ಮುಂದೆ ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಬಾವುಟ ಹಾರಿಸುವಂತಿಲ್ಲ.
ಇದು ಕಾನೂನು. ಈ ಕುರಿತು ಸರ್ಕಾರ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.
 
`ಕಾನೂನಿನ ಅಡಿ ಕರ್ನಾಟಕಕ್ಕೆ ಯಾವುದೇ ಪ್ರತ್ಯೇಕ ಧ್ವಜ ಇಲ್ಲ. ಆದುದರಿಂದ ರಾಷ್ಟ್ರಧ್ವಜ ಹೊರತುಪಡಿಸಿ ಬೇರೆ ಧ್ವಜ ಹಾರಿಸುವುದು ಕಾನೂನು ಬಾಹಿರ. ಈ ಕುರಿತು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಸುತ್ತೋಲೆ ಹೊರಡಿಸಲಾಗುವುದು~ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.

`ಬಹಳ ವರ್ಷಗಳ ಹಿಂದೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಕನ್ನಡ ಧ್ವಜಾರೋಹಣಕ್ಕೆ ಅನುಮತಿ ನೀಡಲಾಗಿತ್ತು. ಈಗ ಆ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು~ ಎಂದು ವಕೀಲರು ವಿವರಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಅವರು ಕನ್ನಡ ಬಾವುಟವನ್ನು ದುರುಪಯೋಗ ಪಡಿಸಿಕೊಂಡು ಬಾವುಟಕ್ಕೆ ಅವಮಾನ ಮಾಡುತ್ತಿದ್ದಾರೆಂದು ಆರೋಪಿಸಿ ವಕೀಲ ಪ್ರಕಾಶ ಶೆಟ್ಟಿ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಮುಂದೆ ಈ ಮಾಹಿತಿ ನೀಡಲಾಗಿದೆ.

ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿರುವ ನಾರಾಯಣಗೌಡ ಅವರು, ಸ್ವಂತ ಲಾಭಕ್ಕಾಗಿ ಕನ್ನಡ ಧ್ವಜವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಬಾಹಿರ ಕೃತ್ಯ ಮಾಡಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ರಕ್ಷಣಾ ವೇದಿಕೆಯ ಬಾವುಟದಲ್ಲಿ ಕರ್ನಾಟಕದ ನಕ್ಷೆಯನ್ನು ಸ್ವಲ್ಪ ಬದಲಿಸಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

`ರಾಷ್ಟ್ರಧ್ವಜ ಬಳಕೆಗೆ ಮಾತ್ರ ಕಾನೂನಿನ ಅಡಿ ಅವಕಾಶ ಇದೆ. ಆದರೆ ರಾಜ್ಯೋತ್ಸವ ಹಾಗೂ ಇತರ ಸರ್ಕಾರಿ ಉತ್ಸವಗಳಲ್ಲಿ ರಾಷ್ಟ್ರಧ್ವಜದ ಪಕ್ಕದಲ್ಲಿ ಕನ್ನಡ ಧ್ವಜವನ್ನೂ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗುತ್ತಿದೆ~ ಎನ್ನುವುದೂ ಅರ್ಜಿದಾರರ ಮತ್ತೊಂದು ಆರೋಪವಾಗಿತ್ತು.

ಆದುದರಿಂದ ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳು, `ಈ ರೀತಿ ಎರಡೆರಡು ಬಾವುಟದ ಬಳಕೆಗೆ ಅವಕಾಶ ಇರುವ ಕುರಿತಾಗಿ ಕಾನೂನು ಏನು ಹೇಳುತ್ತದೆ ಎಂಬ ಬಗ್ಗೆ ವಿವರಣೆ ನೀಡಿ~ ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದುದರಿಂದ ಈ ಮಾಹಿತಿ ನೀಡಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT