ADVERTISEMENT

ಕನ್ನಡ ಭವನದೊಳಗೆ ನುಗ್ಗಿದ ಚರಂಡಿ ನೀರು

ಜಾನಪದ ಅಕಾಡೆಮಿಯ ಪುಸ್ತಕಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 28 ಮೇ 2019, 19:37 IST
Last Updated 28 ಮೇ 2019, 19:37 IST
ಕನ್ನಡ ಭವನ ಆವರಣದಲ್ಲಿ ಕಸದ ರಾಶಿ
ಕನ್ನಡ ಭವನ ಆವರಣದಲ್ಲಿ ಕಸದ ರಾಶಿ   

ಬೆಂಗಳೂರು: ಕಸ ಹಾಗೂ ಒಳಚರಂಡಿಯ ಅಸಮರ್ಪಕ ನಿರ್ವಹಣೆಯಿಂದಾಗಿಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದೊಳಗೆ ಮಳೆ ನೀರು ನುಗ್ಗಿದ್ದು, ಜಾನಪದ ಅಕಾಡೆಮಿಗೆ ಸಂಬಂಧಿಸಿದಪುಸ್ತಕಗಳಿಗೆ ಹಾನಿಯಾಗಿವೆ.

ಕಸ ವಿಲೇವಾರಿ ಹಾಗೂ ಒಳಚರಂಡಿ ನಿರ್ವಹಣೆಯ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಆದರೆ,ಅಗತ್ಯ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡದ ಕಾರಣ ಲೋಕೋಪಯೋಗಿ ಇಲಾಖೆ ಇದೀಗ ನಿರ್ವಹಣೆಯಿಂದ ಹಿಂದೆ ಸರಿದಿದೆ. ಹೀಗಾಗಿ ಕನ್ನಡ ಭವನದ ಆವರಣದಲ್ಲಿಯೇ ಎರಡು ತಿಂಗಳಿನಿಂದ ಕಸ ಕೊಳೆಯುತ್ತಿದೆ.

ಭಾನುವಾರ ರಾತ್ರಿ ಸುರಿದ ಮಳೆಗೆ ಕಸ ಸಹಿತ ಒಳಚರಂಡಿ ನೀರು ಕನ್ನಡ ಭವನದೊಳಗೆ ನುಗ್ಗಿದೆ. ಇದರಿಂದ ಜಾನಪದ ಅಕಾಡೆಮಿಯ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳುಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.

ADVERTISEMENT

‘ಸಂಸ್ಕೃತಿ ಇಲಾಖೆ ಎರಡು ವರ್ಷಗಳಿಂದ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಅದೇ ರೀತಿ, ಕನ್ನಡ ಭವನ ನಿರ್ವಹಣೆಗೆ ಹೊಸ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಈ ವಿಚಾರವನ್ನು ಇಲಾಖೆಯ ನಿರ್ದೇಶಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಅನುದಾನ ಬಿಡುಗಡೆಯಾಗುವವರೆಗೂ ಯಾವುದೇ ಕೆಲಸ ಮಾಡಬೇಡಿ ಎಂದು ನಿರ್ದೇಶಕರೇ ಸೂಚಿಸಿದ್ದಾರೆ. ಹೀಗಾಗಿ ಕಸ ವಿಲೇವಾರಿ ಮಾಡುತ್ತಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಜಾನಕಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.