ADVERTISEMENT

ಕಮಿಷನರ್ ಕಚೇರಿ ಆವರಣದಲ್ಲೇ ದರೋಡೆ!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಬೆಂಗಳೂರು: ದೂರು ನೀಡಲು ಕಮಿಷನರ್ ಕಚೇರಿಗೆ ಬಂದಿದ್ದ ಮಹಿಳೆಯೊಬ್ಬರ ಗಮನ ಬೇರೆಡೆ ಸೆಳೆದ ದುಷ್ಕರ್ಮಿಆಭರಣ ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ಶನಿವಾರ ನಡೆಯಿತು!

ವಿಷಯ ತಿಳಿದೊಡನೆ ಕಮಿಷನರ್ ಕಚೇರಿಯ ಎಲ್ಲ ದ್ವಾರಗಳನ್ನು ಬಂದ್ ಮಾಡಿ ಆರೋಪಿಗಾಗಿ ಹುಡುಕಾಟ ನಡೆಸಲಾಯಿತು. ಕೆಲ ಹೊತ್ತಿನ ಹುಡುಕಾಟದ ನಂತರ ಸಿಕ್ಕ ಆರೋಪಿ ನೀಡಿದ ಮಾಹಿತಿ ಪೊಲೀಸರಿಗೆ ಶಾಕ್ ನೀಡಿತು.

ಇದೊಂದು ಅಣಕು ಪ್ರದರ್ಶನ, ಜಾಗೃತಿ ಮೂಡಿಸಲು ಈ ರೀತಿ ನಟಿಸಲಾಯಿತು ಎಂದು ಗೋಪಿ ಎಂಬುವರು ಹೇಳಿದರು. ಮಹಿಳೆಯರ ಗಮನ ಬೇರೆಡೆ ಸೆಳೆದು ಆಭರಣ ದೋಚುವ ಇರಾನಿ ತಂಡದ ಸದಸ್ಯರನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಗೂ ಮೊದಲು ಈ ಅಣಕು ಪ್ರದರ್ಶನ ನಡೆಯಿತು.
ವೆಂಕಟಾದ್ರಿ, ಮಿಮಿಕ್ರಿ ಗೋಪಿ ಮತ್ತು ಕಿರುತೆರೆ ನಟಿ ಭಾಗ್ಯಶ್ರೀ ಎಂಬುವರು ಅಣುಕು ಪ್ರದರ್ಶನ ನಡೆಸಿದರು.

ಅಣುಕು ಪ್ರದರ್ಶನ ನಡೆಯಲಿದೆ ಎಂದು ಬಹುತೇಕ ಪೊಲೀಸ್ ಸಿಬ್ಬಂದಿಗೇ ಗೊತ್ತಿರಲಿಲ್ಲ. ಕಮಿಷನರ್ ಅವರ ಕೊಠಡಿ ಎದುರೇ ನಿಂತಿದ್ದ ಭಾಗ್ಯಶ್ರೀ ಅವರು `ದುಷ್ಕರ್ಮಿಗಳು ಆಭರಣ ದೋಚಿದರು~ ಎಂದು ಜೋರಾಗಿ ಕೂಗಿಕೊಂಡ ತಕ್ಷಣ ಸಿಬ್ಬಂದಿ ಗೊಂದಲಕ್ಕೀಡಾದರು. ಕೆಲವರು ಕಮಿಷನರ್ ಕಚೇರಿ ಮುಖ್ಯ ದ್ವಾರದ ಕಡೆ ಹೋಗಿ ಗೇಟ್ ಬಂದ್ ಮಾಡಿದರು. ಆವರಣದಲ್ಲೆಲ್ಲಾ ಆರೋಪಿಗಳಿಗಾಗಿ ಹುಡುಕಾಟ ನಡೆಸಿದರು. ಇದೊಂದು ಅಣುಕು ಪ್ರದರ್ಶನ ಎಂದು ಗೊತ್ತಾದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು.

ಗಾಬರಿಯಾದ ಮೊಹಾಂತಿ: ಈ ರೀತಿ ಅಣುಕು ಪ್ರದರ್ಶನ ನಡೆಯುತ್ತದೆ ಎಂದು ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಅವರಿಗೇ ಗೊತ್ತಿರಲಿಲ್ಲ. ಕಚೇರಿಯ ಹೊರಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೂ ಈ ವಿಷಯ ಗೊತ್ತಿರಲಿಲ್ಲ. ಆಭರಣ ದೋಚಲಾಗಿದೆ ಎಂದು ಗೊತ್ತಾದ ನಂತರ ಕಾನ್‌ಸ್ಟೇಬಲ್ ಹೋಗಿ ಮೊಹಾಂತಿ ಅವರಿಗೆ ಮಾಹಿತಿ ನೀಡಿದರು. ಒಂದು ಕ್ಷಣ ಗಲಿಬಿಲಿಗೊಂಡ ಅವರು `ಕಚೇರಿ ಆವರಣದಲ್ಲೇ ಇಂತಹ ಘಟನೆ ನಡೆಯಿತೇ ಎಂದರು. ಸತ್ಯಾಂಶ ಗೊತ್ತಾದ ನಂತರ ಅವರು ನಗಲಾರಂಭಿಸಿದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.