ADVERTISEMENT

ಕರಗ ಕಂಡು ಭಕ್ತರು ಪುಳಕ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 20:28 IST
Last Updated 24 ಏಪ್ರಿಲ್ 2013, 20:28 IST

ಬೆಂಗಳೂರು: ಚಿತ್ರಾ ಪೂರ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಶ್ವವಿಖ್ಯಾತ `ಬೆಂಗಳೂರು ಕರಗ' ಬುಧವಾರ ಸಂಭ್ರಮದಿಂದ ನಡೆಯಿತು. ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಭಕ್ತರು ಈ ಐತಿಹಾಸಿಕ ಉತ್ಸವಕ್ಕೆ ಸಾಕ್ಷಿಯಾದರು.

ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 12.40ಕ್ಕೆ ಧಾರ್ಮಿಕ ಶ್ರದ್ಧಾಭಕ್ತಿಯೊಂದಿಗೆ ಕರಗ ಆರಂಭವಾಯಿತು. ಅರಿಶಿಣ ಬಣ್ಣದ ಪೀತಾಂಬರ ತೊಟ್ಟಿದ್ದ ಸಿ.ಎಂ.ಲೋಕೇಶ್ ಅವರು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಕರಗಕ್ಕೆ ಚಾಲನೆ ನೀಡಿದರು.
ಈ ಹಿಂದೆ ಮೂರು ಬಾರಿ ಕರಗ ಹೊತ್ತಿರುವ ಲೋಕೇಶ್ ಅವರು ದ್ರೌಪತಿ ವೇಷಧಾರಿಯಾಗಿ ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದಿದ್ದರು.

ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ.

ಪೂಜಾ ವಿಧಿವಿಧಾನ ಮುಗಿದ ಬಳಿಕ ಅವರು ದೇವಸ್ಥಾನದಿಂದ ಹೊರ ಬಂದಾಗ ಭಕ್ತವೃಂದ ಪುಳಕಿತವಾಯಿತು. ಖಡ್ಗ ಹಿಡಿದಿದ್ದ ನೂರಾರು ಮಂದಿ `ವೀರಕುಮಾರರ' ಜತೆಗೆ ಲೋಕೇಶ್ ಅವರು ದ್ರೌಪದಿ ಕರಗವನ್ನು (ಕಳಸ) ಹೊತ್ತು ನಗರದ ವಿವಿಧ ಬೀದಿಗಳಲ್ಲಿ ಸಾಗಿದರು. ಕಂದು ಬಣ್ಣದ ಮೇಲ್ವಸ್ತ್ರ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದ ನೂರಾರು ವೀರಕುಮಾರರು ಕತ್ತಿಯ ಸಮೇತ ಮೆರವಣಿಗೆ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಮುನ್ನಡೆದರು.

ದುಂಡು ಮಲ್ಲಿಗೆ ಹೂವುಗಳಿಂದ ಅಲಂಕೃತಗೊಂಡಿದ್ದ ಕರಗವು ಕೃಷ್ಣಸ್ವಾಮಿ ದೇವಸ್ಥಾನ, ಹಲಸೂರುಪೇಟೆಯ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಮುಂದೆ ಸಾಗಿತು. ನಗರ್ತಪೇಟೆಯ ವೇಣುಗೋಪಾಲಸ್ವಾಮಿ, ಸಿದ್ದಣ್ಣಗಲ್ಲಿಯ ಭೈರೇದೇವರ ದೇವಸ್ಥಾನ, ಕಬ್ಬನ್‌ಪೇಟೆಯ ರಾಮಸೇವಾ ಮಂದಿರ, ಮೈಸೂರು ಬ್ಯಾಂಕ್ ವೃತ್ತದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಮಕ್ಕಳ ಬಸವನಗುಡಿ, ಅರಳೆಪೇಟೆಯ ಮಸ್ತಾನ್ ಸಾಹೇಬರ ದರ್ಗಾ, ಗಾಣಿಗರಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನ, ಕೆಂಪೇಗೌಡ ವೃತ್ತದ ಬಳಿಯ ಅಣ್ಣಮ್ಮ ದೇವಸ್ಥಾನದ ಮೂಲಕ ನಗರದ ನಾಲ್ಕೂ ದಿಕ್ಕುಗಳಲ್ಲಿ ಕರಗ ಸಂಚರಿಸಿ ಗುರುವಾರ ಬೆಳಗಿನ ಜಾವ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹಿಂದಿರುಗಿ ಗರ್ಭಗುಡಿ ಸೇರಿತು.

ಭಕ್ತ ಸಾಗರ: ಕರಗ ಉತ್ಸವದ ಪ್ರಯುಕ್ತ ಧರ್ಮರಾಯಸ್ವಾಮಿ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ತಲುಪುವ ಎಲ್ಲಾ ದೇವಸ್ಥಾನಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಹಲವೆಡೆ ಅನ್ನ ಛತ್ರಗಳನ್ನು ತೆರೆಯಲಾಗಿತ್ತು. ಧರ್ಮರಾಯಸ್ವಾಮಿ ಮತ್ತು ದ್ರೌಪದಿಯನ್ನು ಸ್ಮರಿಸಿ ವಿವಿಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಸ್ಥಳೀಯರು ಹಾಗೂ ಅಂಗಡಿಗಳ ಮಾಲೀಕರು ಮೊಸರನ್ನ, ದೋಸೆ, ಪೊಂಗಲ್, ಬಿಸಿಬೇಳೆ ಬಾತ್ ಮತ್ತಿತರ ಭಕ್ಷ್ಯಗಳ ಪ್ರಸಾದ ನೀಡಿದರು.

ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಕರಗದ ದರ್ಶನ ಪಡೆದು ಧನ್ಯತೆ ಅನುಭವಿಸಿದರು. ಭಕ್ತರು ವಿವಿಧ ಬಗೆಯ ಹೂಗಳನ್ನು ಕರಗದ ಮೇಲೆ ಎಸೆಯುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳಾದ ನೆ.ಲ.ನರೇಂದ್ರಬಾಬು, ಎನ್.ಎ.ಹ್ಯಾರಿಸ್ ಮತ್ತು ಸಂಸದ ಅನಂತಕುಮಾರ್ ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT