ADVERTISEMENT

`ಕಲಾವಿದರ ಕಷ್ಟಕ್ಕೆ ಸ್ಪಂದಿಸಬೇಕು'

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST
ನಗರದಲ್ಲಿ ಬುಧವಾರ ನಡೆದ `ಡಿ.ಎಸ್- ಮ್ಯಾಕ್ಸ್ ಕಲಾಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟಿಯರಾದ ಗಿರಿಜಾ ಲೋಕೇಶ್, ಜಯಂತಿ, ಪದ್ಮಾ ವಾಸಂತಿ, ಎಂ.ಎನ್.ಲಕ್ಷ್ಮೀದೇವಿ, ಲೀಲಾವತಿ ಕಾಣಿಸಿಕೊಂಡಿದ್ದು ಹೀಗೆ
ನಗರದಲ್ಲಿ ಬುಧವಾರ ನಡೆದ `ಡಿ.ಎಸ್- ಮ್ಯಾಕ್ಸ್ ಕಲಾಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟಿಯರಾದ ಗಿರಿಜಾ ಲೋಕೇಶ್, ಜಯಂತಿ, ಪದ್ಮಾ ವಾಸಂತಿ, ಎಂ.ಎನ್.ಲಕ್ಷ್ಮೀದೇವಿ, ಲೀಲಾವತಿ ಕಾಣಿಸಿಕೊಂಡಿದ್ದು ಹೀಗೆ   

ಬೆಂಗಳೂರು: `ಕಲಾವಿದರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಜವಾಬ್ದಾರಿ. ಕಲಾವಿದರಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಡಿ.ಎಸ್- ಮ್ಯಾಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಗರದ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ಬುಧವಾರ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ `ಡಿ.ಎಸ್- ಮ್ಯಾಕ್ಸ್ ಕಲಾಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕನ್ನಡ ಚಲನಚಿತ್ರ ಕ್ಷೇತ್ರದ ಅಪೂರ್ವ ಪ್ರತಿಭೆಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಸರ್ಕಾರ ಮಾಡಬೇಕಾದ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಎಂಟು ವರ್ಷಗಳಲ್ಲಿ ಸಂಸ್ಥೆಯ ಬೆಳವಣಿಗೆ ಅಚ್ಚರಿ ಮೂಡಿಸುವಂತಹುದು' ಎಂದರು. ಪ್ರಶಸ್ತಿ ಸ್ವೀಕರಿಸಿದ ಗಿರಿಜಾ ಲೋಕೇಶ್ ಮಾತನಾಡಿ, `ಸಂಸ್ಥೆ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ' ಎಂದು ಆಶಿಸಿದರು. 

ಪ್ರಶಸ್ತಿ ಪುರಸ್ಕೃತರು:
ಹಿರಿಯ ನಟಿಯರಾದ ಲೀಲಾವತಿ, ಜಯಂತಿ, ಬಿ.ವಿ.ರಾಧಾ, ಗಿರಿಜಾ ಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ಪದ್ಮಾ ವಾಸಂತಿ, ಭವ್ಯ, ರೇಖಾದಾಸ್, ಹಿರಿಯ ನಟರಾದ ಉಮೇಶ್, ಹೊನ್ನವಳ್ಳಿ ಕೃಷ್ಣ, ಕೀರ್ತಿರಾಜ್, ಡಿಂಗ್ರಿ ನಾಗರಾಜ್, ಬಿರಾದಾರ್ ಅವರಿಗೆ `ಕಲಾಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ನಟರಾದ ದ್ವಾರಕೀಶ್, ಕೆ.ಎಸ್.ಎಲ್.ಸ್ವಾಮಿ (ರವಿ), ಜಗ್ಗೇಶ್, ನಿರ್ದೇಶಕ ಗುರುಪ್ರಸಾದ್, ಸಂಸ್ಥೆಯ ಮುಖ್ಯಸ್ಥ ಕೆ.ವಿ. ಸತೀಶ್, ನಿರ್ದೇಶಕಿ ಆಶಾ ಸತೀಶ್, ಕಾರ್ಯಕಾರಿ ನಿರ್ದೇಶಕ ಎಸ್.ಪಿ.ದಯಾನಂದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.