ADVERTISEMENT

ಕಲಾವಿದರ ನಿಧಿ 1 ಕೋಟಿಗೆ ಏರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:10 IST
Last Updated 8 ಮಾರ್ಚ್ 2012, 19:10 IST

ಬೆಂಗಳೂರು: `ಜನಪದ ಕಲಾವಿದರ ಸಂಚಿತ ನಿಧಿಯ ಮೊತ್ತವನ್ನು 25 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗೆ ಏರಿಸಬೇಕು~ ಎಂದು ಸಂಸದ ಅನಂತಕುಮಾರ್ ಮುಖ್ಯಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಲ್ಲಿ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಜನಪದ ಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 `ಸಂಸ್ಕೃತಿ ಮತ್ತು ಕಲೆಯನ್ನು ಪಸರಿಸುವ ಜನಪದ ಕಲಾವಿದರಿಗೆ ನಾನು ಮತ್ತು ಹೇಮಚಂದ್ರಸಾಗರ್ ಜಂಟಿಯಾಗಿ ಸಂಸದ ಮತ್ತು ಶಾಸಕರ ನಿಧಿಯಿಂದ 25 ಲಕ್ಷ ರೂಪಾಯಿ ನೀಡುತ್ತೇವೆ~ ಎಂದು ಅವರು ಭರವಸೆ ನೀಡಿದರು.

`ಕನ್ನಡ ಮತ್ತು ಸಂಸ್ಕೃತಿ ಸಚಿವರು ಮತ್ತು ಆಯುಕ್ತರು ಶಿಫಾರಸು ಮಾಡುವ ಒಟ್ಟು 100 ತಂಡಗಳಿಗೆ ಅಗತ್ಯವಿರುವ ರಂಗ ಪರಿಕರಗಳನ್ನು ಈ ಹಣದಲ್ಲಿ ನೀಡಲಾಗುತ್ತದೆ~ ಎಂದ ಅವರು, `ಪಾಶ್ಚಿಮಾತ್ಯ ಸಂಸ್ಕೃತಿಯ ತೆಕ್ಕೆಯಿಂದ ಯುವ ಜನರನ್ನು ಬಿಡಿಸಲು ಜನಪದ ಸಂಸ್ಕೃತಿ ಉತ್ತಮ ಮಾರ್ಗ. ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿ~ ಎಂದು ಆಶಿಸಿದರು.

ಸಚಿವ ಗೋವಿಂದ ಎಂ.ಕಾರಜೋಳ, `ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜನಪದ ಕಲಾವಿದರಿದ್ದಾರೆ. ಅವರ ಕಲಾಪ್ರತಿಭೆಯನ್ನು ಮುಂದಿನ ತಲೆಮಾರಿಗೂ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸುತ್ತಲೇ ಇದೆ. ಸಂಸ್ಕೃತಿಯ ವಾರಸುದಾರರಾಗಿರುವ ಅವರಿಗೆ ಸಾಮಾನ್ಯ ಜನರಿಂದ ಅಧಿಕ ಪ್ರೋತ್ಸಾಹ ದೊರೆಯಬೇಕಿದೆ~ ಎಂದು ಹೇಳಿದರು.

ರಾಜ್ಯದಾದ್ಯಂತ ಆಗಮಿಸಿದ್ದ ವಿವಿಧ ಕಲಾವಿದರು ಪೂಜಾಕುಣಿತ, ಡೊಳ್ಳು ಕಣಿತ, ಕಣಿ ಹಲಗೆ, ಕರಗ ಕೋಲಾಟ, ವೀರಗಾಸೆ, ಕಂಸಾಳೆ, ನಗಾರಿ, ನೀಲಗಾರರ ಮೇಳ ಸೇರಿದಂತೆ ಜನಪದ ನೃತ್ಯವನ್ನು ಪ್ರದರ್ಶಿಸಿದರು. ಶಾಸಕ ಡಾ.ಡಿ.ಹೇಮಚಂದ್ರಸಾಗರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಇತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.