ADVERTISEMENT

ಕಲಾವಿದೆಯ ನೃತ್ಯದಲ್ಲಿ ಅರಳಿತ್ತು ಕಾಳಿಯ ಅವತಾರ !

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಪೂಜಿಸಲ್ಪಡುವ ಮಹಾಕಾಳಿಯ ಅಪರಾವತಾರ ಎಂಬಂತೆಯೇ ಕಂಡು ಬಂದ ಈ ಕಲಾವಿದೆ ಒಡಿಸ್ಸಿ ನೃತ್ಯದ ಮೂಲಕ ಕಾಳಿಯ ರೌದ್ರ, ಭೀಭತ್ಸ ಮತ್ತು ಕರುಣ ರಸಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿದಳು. ಅದೇ ಸಂದರ್ಭದಲ್ಲಿ ಮೂರು ತಲೆಮಾರಿಗೆ ಸೇರಿದ ಕಲಾವಿದರು ತಮ್ಮ ಉತ್ಕೃಷ್ಟ ಪಿಟೀಲು ವಾದನದ ಮೂಲಕ ಬೆಂಗಳೂರಿಗರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು.

ಆ ಕಲಾವಿದೆ ಒಡಿಶಾದ ನೃತ್ಯಗಾರ್ತಿ ರಶ್ಮಿ ರಾಜ್. ಮೂರು ತಲೆಮಾರಿನ ಕಲಾವಿದರೆಂದರೆ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಡಾ.ಎನ್.ರಾಜಂ, ಅವರ ಮಗಳು ಡಾ.ಸಂಗೀತಾ ಶಂಕರ್, ಮೊಮ್ಮಕ್ಕಳಾದ ರಾಗಿಣಿ ಮತ್ತು ನಂದಿನಿ.

ಖ್ಯಾತ ಸಿತಾರ್ ವಾದಕ, ಧಾರವಾಡ ಮೂಲದ ಉಸ್ತಾದ್ ಬಾಲೇಖಾನ್ ಅವರ ಜನ್ಮದಿನದ ಪ್ರಯುಕ್ತ `ಬಾಲೇಖಾನ್ ಸ್ಮಾರಕ ಟ್ರಸ್ಟ್~ `ಡೆಕ್ಕನ್ ಹೆರಾಲ್ಡ್~ ಮಾಧ್ಯಮ ಪ್ರಾಯೋಜಕತ್ವದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಂಗೀತೋತ್ಸವದಲ್ಲಿ ಈ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು.
 
45 ನಿಮಿಷಗಳ ಕಾಲ ಮೂರು ಬಗೆಯ ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿದ ರಶ್ಮಿ ರಾಜ್ ಅವರು ಬೆಂಗಳೂರು ಸಭಿಕರಿಗೆ ಅಪರೂಪವಾಗಿ ದೊರೆಯುವ ಆ ನೃತ್ಯ ಪ್ರಕಾರದ ಸೊಬಗನ್ನು ಉಣಬಡಿಸಿದರು.ಇವರಿಗೆ ಹಾರ್ಮೋನಿಯಂ ಸಾಥ್ ನೀಡಿದವರು ಸ್ವತಃ ರಾಗ ಸಂಯೋಜಕರಾಗಿರುವ ಬಿನೋದ್ ಬಿಹಾರಿ ಪಾಂಡಾ. ಮೃದಂಗ ಸಾಥ್ ನೀಡಿದವರು, ಸ್ವತಃ ಗಾಯಕರಾಗಿರುವ ಮತ್ತು ಹಲವಾರು ಅಂತರರಾಷ್ಟ್ರೀಯ ಕಾರ್ಯಕ್ರಮ ನೀಡಿರುವ ಬುಧಾನಾಥ್ ಸ್ವೈನ್.

ಪಿಟೀಲಿನಲ್ಲಿ ಸಂಜೀವಕುಮಾರ್ ಕುಂಡು, ಕೊಳಲಿನಲ್ಲಿ ಸೊಮಯ್ ರಂಜನ್ ಜೋಶಿ. ನೃತ್ಯದ ನಂತರ ಅತಿ ಹೆಚ್ಚು ಗಮನ ಸೆಳೆದದ್ದೂ ಈ ಯುವ ಕಲಾವಿದನ ಕೊಳಲ ನಾದವೇ!ಮಂಜಲಾಚರಣಂ, ರಾಗ್ ರಾಗೇಶ್ರೀಯಲ್ಲಿ ಪಲ್ಲವಿ ಮತ್ತು ಮಹಾಕಾಳಿಯ ನೃತ್ಯ ರೂಪಕಗಳನ್ನು ರಶ್ಮಿ ಪ್ರಸ್ತುತಪಡಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಪಿಟೀಲು ವಾದನ ಕೇಳಿ ಬಂದುದು ಡಾ.ಎನ್.ರಾಜಂ ಮತ್ತು ಅವರ ಮಗಳು, ಮೊಮ್ಮಕ್ಕಳಿಂದ. ಮಿಯಾ ಮಲ್ಹಾರ ರಾಗದಲ್ಲಿ ಮೊದಲಿಗೆ ಕಾರ್ಯಕ್ರಮ ಆರಂಭಿಸಿದ ರಾಜಂ ಅವರು ತಮ್ಮ ಕಣ್ಸನ್ನೆಯಿಂದಲೇ ಮೊಮ್ಮಕ್ಕಳಿಗೆ ವಯಲಿನ್ ಪಾಠವನ್ನು ವೇದಿಕೆಯಲ್ಲಿ ಹೇಳಿಕೊಟ್ಟರು. ಖ್ಯಾತ ತಬಲಾ ವಾದಕ ಕುಟುಂಬವಾದ ನಾಕೋಡ ಮನೆತನದ ವಿಶ್ವನಾಥ ನಾಕೋಡ ತಬಲಾ ಸಾಥ್ ನೀಡಿದರು.

ಪಿಟೀಲು ವಾದನ ಆರಂಭಕ್ಕೆ ಮುನ್ನ ಮಾತನಾಡಿದ ರಾಜಂ, ಬಾಲೇಖಾನ್ ಅವರೊಂದಿಗೆ ಸಂಗೀತ ಕಾರ್ಯಕ್ರಮ ನೀಡಿದ್ದನ್ನು ಸ್ಮರಿಸಿದರು. `ಅತ್ಯಂತ ತನ್ಮಯರಾಗಿ ಬಾಲೇಖಾನ್ ತಮ್ಮ ಶಿಷ್ಯರಿಗೆ ಸಂಗೀತ ಪಾಠ ಮಾಡುತ್ತಿದ್ದರು~ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಬಾಲೇಖಾನ್ ಪುತ್ರರಾದ ರೈಜ್ ಖಾನ್, ಹಫೀಜ್ ಖಾನ್, ಕಾರ್ಮಿಕ ಮುಖಂಡ ರಾಘವೇಂದ್ರ ಆಯಿ ಭಾಗವಹಿಸಿದ್ದರು.ಆಕಾಶವಾಣಿ ಧಾರವಾಡ ಕೇಂದ್ರದ ನಿರೂಪಕ ಶಶಿಧರ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು. ಬಾಲೇಖಾನ್ ಸ್ಮಾರಕ ಟ್ರಸ್ಟ್ ಎರಡನೇ ಬಾರಿಗೆ ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.