
ಮಾಗಡಿ: ತಾಲ್ಲೂಕಿನ ಗುದ್ದಲಹಳ್ಳಿಯ ವಡ್ಡರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಸುಮಾರು 30ಕ್ಕೂ ಹೆಚ್ಚು ಜನರು ತೀವ್ರವಾಗಿ ಅಸ್ವಸ್ಥಗೊಂಡು ಪಟ್ಟಣದ ಸರ್ಕಾರಿ ಮತ್ತು ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
`ವಡ್ಡರಹಟ್ಟಿಯಲ್ಲಿ ಶನಿವಾರ ಬೆಳಿಗ್ಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಬಹುತೇಕ ನಿವಾಸಿಗಳು ಅಸ್ವಸ್ಥರಾದರು. ಕೂಡಲೇ ಅವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಟೆಂಪೋದಲ್ಲಿ ಕರೆ ತರಲಾಯಿತು~ ಎಂದು ಗ್ರಾಮದ ಸಿದ್ದರಾಜು ತಿಳಿಸಿದರು.
`ಗರ್ಭಿಣಿ ಮುನಿಯಮ್ಮ ಎಂಬುವವರು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಅಸ್ವಸ್ಥರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ~ ಎಂದು ಡಾ. ವಿಜಯಾ ತಿಳಿಸಿದರು.
`ತಾಲ್ಲೂಕಿನ ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುದ್ದಲಹಳ್ಳಿ ವಡ್ಡರಹಟ್ಟಿಯಲ್ಲಿ ರೈತ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಇರುವುದಿರಂದ ಇವರೆಲ್ಲಾ ಕಲುಷಿತ ನೀರನ್ನೇ ಕುಡಿಯುವಂತಹ ದುಃಸ್ಥಿತಿ ಇದೆ.
ಆದ್ದರಿಂದ ವಡ್ಡರಹಟ್ಟಿ ಮತ್ತು ಸಿದ್ದೇದೇವರ ಬೆಟ್ಟದ ಇರುಳಿಗರ ಕಾಲೋನಿಗಳಿಗೆ ಕೂಡಲೇ ಮೂಲಭೂತ ಸೌಕರ್ಯ ಕಲ್ಪಿಸಬೇಕು~ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿ.ಆರ್. ನಾಗೇಶ್ ಹಾಗೂ ರಾಜ್ಯ ಪ್ರತಿನಿಧಿ ವನಜಾ ಒತ್ತಾಯಿಸಿದರು. ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಬಂದ ಅವರು ಸೂಕ್ತ ಚಿಕಿತ್ಸೆ ಕೊಡಿಸಲು ನೆರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.